ಹನುಮಸಾಗರ: ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಶಾಸಕ ಮತ್ತು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಕಿಡಿಕಾರಿದರು.
ಸಚಿವರು ನಮ್ಮ ಕನಕಗಿರಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಕಡೆ ಗಮನ ಕೊಡುತ್ತಿಲ್ಲ. ಸೋಲು ಹತಾಶೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಕೊಪ್ಪಳ ಏತ ನೀರಾವರಿ, ಕೃಷ್ಣಾ ಬಿ ಸ್ಕೀಮ್ ಬಿಜೆಪಿ ಜಾರಿಗೆ ತಂದಿದೆ. ಕುಮಾರಸ್ವಾಮಿ ಅವರು ಕೆರೆ ತುಂಬಿಸುವ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳನ್ನು ಮೋದಿ ಅಭಿವೃದ್ಧಿ ಮಾಡಿದ್ದಾರೆ. ೨ ಕೊಟ್ಟು ೧೦ ಕಸಿದುಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸುವುದು ಗ್ಯಾರಂಟಿ. ಸಿದ್ದರಾಮಯ್ಯ ಅವರಿಗೆ ಹಣ ಸಂಗ್ರಹಿಸುವುದು ಹಾಗೂ ಕೊಡುವುದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ ಅವರಿಗೆ ಗೊತ್ತು. ಅದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಶಿವಕುಮಾರ ಬೇಕು. ನಮ್ಮ ದೇಶದ ಸಂಸ್ಕೃತಿ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ. ಜಾತಿ ಜಾತಿ ನಡುವೆ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.ಬಿಜೆಪಿ ಅಭ್ಯರ್ಥಿ ಡಾ. ಕೆ. ಬಸವರಾಜ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಔಷಧವನ್ನು ವಿಶ್ವಕ್ಕೆ ಅಗತ್ಯವಾಗುವಂತೆ ಮಾಡಿದ್ದಾರೆ. ರಾಮ ಮಂದಿರದಂತೆ ಅಂಜನಾದ್ರಿಯಲ್ಲಿ ಹನುಮ ಮಂದಿರ ನಿರ್ಮಾಣ ಮಾಡಬೇಕಾಗಿದೆ. ನಮ್ಮ ದೇಶ, ಜಿಲ್ಲೆ ಹಾಗೂ ನಮ್ಮ ಕುಷ್ಟಗಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶರಣು ತಳ್ಳಿಕೇರಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ ಗುಳಗಣ್ಣನವರ, ತಾಲೂಕಾಧ್ಯಕ್ಷ ಮಹಾಂತೇಶ ಬಾದಾಮಿ, ಮಲ್ಲಣ್ಣ ಪಲ್ಲೇದ, ಫಕೀರಪ್ಪ ಚಳಗೇರಿ, ವೆಂಕಪ್ಪಯ್ಯ ದೇಸಾಯಿ, ಬಸವರಾಜ ಹಳ್ಳೂರ, ಕರಿಸಿದ್ಧಪ್ಪ ಕುಷ್ಟಗಿ, ವಿಶ್ವನಾಥ ನಾಗೂರ, ದೇವೇಂದ್ರಪ್ಪ ಬಳೂಟಗಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಬಸವರಾಜ ದ್ಯಾವಣ್ಣನವರ ಇತರರು ಇದ್ದರು.