ಕನ್ನಡಪ್ರಭ ವಾರ್ತೆ ಮುನಿರಾಬಾದ್ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆಯ ಮೇಲೆ ಬಿದ್ದಿದ್ದ ದಂಪತಿ ಹಾಗೂ ಅವರ ಮಗುವನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾನವೀಯತೆ ಮೆರೆದಿದ್ದಾರೆ.ಭಾನುವಾರ ಸಂಜೆ 8 ಗಂಟೆಗೆ ಸಚಿವ ಶಿವರಾಜ್ ತಂಗಡಗಿ ಕೊಪ್ಪಳದಲ್ಲಿ ಮೀಟಿಂಗ್ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 50 ಮಾರ್ಗವಾಗಿ ಕನಕಗಿರಿಗೆ ತೆರಳುತ್ತಿರುವಾಗ ಸಮೀಪದ ಶಹಾಪುರ ಗ್ರಾಮದ ಬಳಿ ದ್ವಿಚಕ್ರ ವಾಹನ ಸವಾರ ಹಾಗೂ ಆತನ ಹೆಂಡತಿ, ಮಗು ಅಪಘಾತಕ್ಕೀಡಾಗಿ ರಸ್ತೆಯ ಮೇಲೆ ಬಿದ್ದಿರುವುದು ಸಚಿವರ ಗಮನಕ್ಕೆ ಬಂದಿದೆ. ತಕ್ಷಣ ಸಚಿವರು ಮುನಿರಾಬಾದ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುನಿಲ್ ಅವರಿಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಹೊಸಪೇಟೆಯಿಂದ ಕುಕನೂರು ತಾಲೂಕಿನ ಯಡಿಯಾಪುರ ಗ್ರಾಮಕ್ಕೆ ದಂಪತಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನ ಚಾಲಕ ಚಿದಾನಂದ, ಅವರ 6 ವರ್ಷದ ಪುತ್ರಿ ಈರಮ್ಮ ಗಾಯಗೊಂಡಿದ್ದಾರೆ. ಅವರ ಪತ್ನಿಗೆ ಯಾವುದೇ ಗಾಯವಾಗಿಲ್ಲ.