ಕನಕಗಿರಿ/ನವಲಿ:
ಸಚಿವ ಶಿವರಾಜ ತಂಗಡಗಿ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ನವಲಿಯ ಮಾಕಣ್ಣ ವೃತ್ತದಲ್ಲಿ ನೊಂದ ದಲಿತ ಕುಟುಂಬ ಹಾಗೂ ಸಮಾನ ಮನಸ್ಕರಿಂದ 48 ಗಂಟೆಗಳ ಅಹೋರಾತ್ರಿ ಧರಣಿ ಶುಕ್ರವಾರ ಆರಂಭಗೊಂಡಿದೆ.ಪ್ರಗತಿಪರ ಹೋರಾಟಗಾರ ಲಿಂಗರಾಜ ಹೂಗಾರ ಮಾತನಾಡಿ, ಎಸ್ಸಿ ಮೀಸಲು ಕ್ಷೇತ್ರವಾದ ಕನಕಗಿರಿಯಲ್ಲಿ ದಲಿತ ಕುಟುಂಬಗಳ ಮೇಲೆಯೇ ದೌರ್ಜನ್ಯವಾಗುತ್ತಿರುವುದು ಖಂಡನೀಯ. ಅಧಿಕಾರಿಗಳು ಸಹ ಸಚಿವರ ಮಾತಿನಂತೆ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನೊಂದ ಕುಟುಂಬ ಹಾಗೂ ಸಮಾನ ಮನಸ್ಕರು ನಡೆಸುತ್ತಿರುವ ಈ ಹೋರಾಟದ ಸ್ಥಳಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಗಳತೆ ದೂರದಲ್ಲಿರುವ ಪಿಡಿಒ ಕೂಡಾ ಸೌಜನ್ಯಕ್ಕಾದರೂ ಸ್ಥಳಕ್ಕೆ ಬಂದಿಲ್ಲ ಎಂದು ದೂರಿದರು.ಮಾಜಿ ಗ್ರಾಪಂ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮಾತನಾಡಿ, ಕ್ಷೇತ್ರದಲ್ಲಿ ಸಚಿವ ತಂಗಡಗಿ ಅವರು ದಲಿತರ ನಡುವೆಯೇ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದಲಿತ ಕುಟುಂಬವೊಂದು ಮನೆ ನಿರ್ಮಾಣಕ್ಕೆ ಮುಂದಾದರೆ ಸಚಿವರು, ಅವರ ಹಿಂಬಾಲಕರ ಮಾತು ಕೇಳಿ ಮನೆ ನಿರ್ಮಾಣಕ್ಕೆ ಪೊಲೀಸರು, ತಹಸೀಲ್ದಾರ್, ಪಿಡಿಒ ಮೂಲಕ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಸಚಿವರು ೩ ತಿಂಗಳಿಂದ ಈ ರೀತಿ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
೪೮ ಗಂಟೆಯೊಳಗೆ ಅಧಿಕಾರಿಗಳು ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟವನ್ನು ಜಿಲ್ಲಾ ವ್ಯಾಪ್ತಿಗೆ ತೆಗೆದುಕೊಂಡು ಹೋಗಿ ನ್ಯಾಯ ಕೇಳುತ್ತೇವೆ ಎಂದು ಎಚ್ಚರಿಸಿದರು.ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭೀಮನಗೌಡ, ಕಾರಟಗಿ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಕನಕಗಿರಿ ಪಪಂ ಸದಸ್ಯ ಹನುಮಂತ ಬಸರಿಗಿಡ, ಬಿಜೆಪಿ ಮಂಡಲ ಉಪಾಧ್ಯಕ್ಷ ನಿಂಗಪ್ಪ ನಾಯಕ, ನೊಂದ ಕುಟುಂಬದ ವೀರೇಶ ನಾಗವಂಶಿ ಇತರರಿದ್ದರು.ಅಶಾಂತಿಗೆ ಕಾರಣವಾಗಬೇಡಿ
ಸ್ಥಳಕ್ಕೆ ಆಗಮಿಸಿದ ಪಿಡಿಒ ವೀರಣ್ಣ ನಕ್ರಳ್ಳಿಗೆ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಕಾನೂನು ಪಾಲನೆ ಮಾಡಬೇಕಾದ ಅಧಿಕಾರಿಗಳೇ ಒತ್ತಡಕ್ಕೆ ಮಣಿದರೆ ಹೇಗೆ? ನೀವು ಸಂವಿಧಾನ ಪಾಲಿಸುವ ಜತೆಗೆ ಯುವ ಜನತೆಗೆ ತಿಳಿಸಿಕೊಡಬೇಕು. ಅದನ್ನು ಬಿಟ್ಟು ನೀವೇ ಜನರ ದಾರಿ ತಪ್ಪಿಸಿದರೆ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಯುವ ಜನತೆ ನಡು ರಸ್ತೆಯಲ್ಲಿಯೇ ಹೊಡೆದಾಡಿ ಸಾಯುತ್ತಾರೆ. ವೀರೇಶ ನಾಗವಂಶಿ ಒಬ್ಬರೇ ಮನೆ ನಿರ್ಮಿಸಿಕೊಳ್ಳಲು ಮುಂದಾಗಿಲ್ಲ. ಅಲ್ಲಿ ಹತ್ತಾರು ಮನೆಗಳಿವೆ. ಎಲ್ಲರಿಗೂ ಹಕ್ಕುಪತ್ರ ನೀಡಿಲ್ಲ. ಆದರೆ, ಅವರಿಗೆ ಮಾತ್ರ ಯಾಕೆ? ತೊಂದರೆ ನೀಡುತ್ತಿದ್ದೀರಿ ಎಂದಿರುವ ವಿಡಿಯೋ ವೈರಲ್ ಆಗಿದೆ.