ಪ್ರಧಾನಿ ಎದುರು ಕಬ್ಬು ಬೆಳೆಗಾರರ ಸಮಸ್ಯೆ ಗಮನ ಸೆಳೆಯಲು ಸಿಎಂಗೆ ಸಚಿವ ತಿಮ್ಮಾಪೂರ ಮನವಿ

KannadaprabhaNewsNetwork |  
Published : Nov 18, 2025, 02:15 AM IST
(ಫೋಟೊ 17ಬಿಕೆಟಿ9, ರಾಜಧಾನಿ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.) | Kannada Prabha

ಸಾರಾಂಶ

ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮುನ್ನ ನಡೆದ ಈ ಭೇಟಿಯಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿಕೂಲವಾಗಿರುವ ಕೇಂದ್ರದ ಕೆಲವು ನಿರ್ಧಾರಗಳನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಸಚಿವರು ಒತ್ತಾಯಿಸಿದರು.

ಕಬ್ಬಿನ ರಿಕವರಿ ದರ ಶೇ.9.5ಕ್ಕೆ ಮರಳಿಸಿ: 2009ರಲ್ಲಿ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ, ಕಬ್ಬಿನ ಮೂಲ ರಿಕವರಿ ದರ ಶೇ.9.5ಕ್ಕೆ ನಿಗದಿಪಡಿಸಿತ್ತು. 2024ರ ಸೆಪ್ಟೆಂಬರ್‌ ನಲ್ಲಿ ಅದನ್ನು ಶೇ.10.25ಕ್ಕೆ ಹೆಚ್ಚಿಸಿತು. ಈ ನಿರ್ಧಾರದಿಂದ ಪ್ರತಿ ಟನ್ ಕಬ್ಬಿಗೆ ರೈತರಿಗೆ ₹260-270ರಷ್ಟು ನಷ್ಟವಾಗುತ್ತಿದೆ. ಆದ್ದರಿಂದ ಶೇ.10.25 ರಿಕವರಿ ದರ ತಕ್ಷಣ ರದ್ದುಗೊಳಿಸಿ ಹಿಂದಿನ ಶೇ. 9.5 ದರವನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಇಥನಾಲ್ ಹಂಚಿಕೆಯಲ್ಲಿ ತಾರತಮ್ಯ: ಮಹಾರಾಷ್ಟ್ರಕ್ಕೆ 12.4%, ಉತ್ತರ ಪ್ರದೇಶಕ್ಕೆ 15.3% ಇಥೆನಾಲ್ ಉತ್ಪಾದನಾ ಹಂಚಿಕೆ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 11.1% ಮಾತ್ರ ನೀಡುತ್ತಿದೆ. ಈ ತಾರತಮ್ಯ ಸರಿಪಡಿಸಿ, ಇತರ ರಾಜ್ಯಗಳಿಗೆ ಸಿಗುತ್ತಿರುವಷ್ಟೇ ಪ್ರಮಾಣ ಕರ್ನಾಟಕಕ್ಕೂ ವಿಸ್ತರಿಸಬೇಕೆಂದು ಆಗ್ರಹಿಸಲಾಗಿದೆ.

ಸಕ್ಕರೆ ರಫ್ತು ನೀತಿ ಸಡಿಲಿಕೆ: ಸಕ್ಕರೆ ರಫ್ತಿಗೆ ಕೇಂದ್ರ ಅವಕಾಶ ನೀಡಿದರೆ ಸಕ್ಕರೆ ಕಾರ್ಖಾನೆಗಳು ಉತ್ತಮ ದರ ಪಡೆದು ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ರಫ್ತು ನೀತಿ ಶೀಘ್ರ ಸಡಿಲಗೊಳಿಸಬೇಕೆಂದು ಮನವಿ ಮಾಡಲಾಯಿತು.

ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಸಕ್ಕರೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಮತ್ತು ಗೃಹಬಳಕೆಗಾಗಿ ಪ್ರತ್ಯೇಕ ಮಾರಾಟ ದರ ನಿಗದಿಪಡಿಸಿ ನಿಯಂತ್ರಿತ ಮಾರಾಟ ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರ ಕ್ರಮ ಕೈಕೊಳ್ಳಬೇಕು. ಈ ಎಲ್ಲಾ ವಿಷಯಗಳನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಕಬ್ಬು ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ನ್ಯಾಯ ಒದಗಿಸುವಂತೆ ಸಚಿವ ಆರ್.ಬಿ. ತಿಮ್ಮಾಪುರ ಒತ್ತಾಯಿಸಿದರು.

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಹಿರಿಯ ಮುಖಂಡರಾದ ಉದಯಸಿಂಗ್ ಪಡತಾರೆ, ರಂಗನಗೌಡ ಪಾಟೀಲ, ಜಿಲ್ಲಾ ಕಿಶಾನ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ಹಟ್ಟಿ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ