ಕನ್ನಡಪ್ರಭ ವಾರ್ತೆ ಲೋಕಾಪುರ
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ಹುಟ್ಟುಹಬ್ಬದ ನಿಮಿತ್ತ ಉದಪುಡಿ ಪರಿವಾರ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೃಹತ್ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಹಾಕಿ, ಹೂವಿನ ಸುರಿಮಳೆಗೈದು ಸಂಭ್ರಮಿಸಿದರು.ಬಸವೇಶ್ವರ ಹಾಗೂ ವಾಲ್ಮೀಕಿ ಪ್ರತಿಮೆಗೆ ಹೂಮಾಲೆ ಹಾಕಿ ಲೋಕೇಶ್ವರ, ದುರ್ಗಾದೇವಿ, ಕಾಶಲಿಂಗೇಶ್ವರ ದೇವಸ್ಥಾನ, ಹಿರೇಮಠ ಮತ್ತು ಜ್ಞಾನೇಶ್ವರ ಮಠ, ಶಿವಯೋಗಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಸವೇಶ್ವರ ವೃತ್ತದಿಂದ ಉದಪುಡಿ ಕಚೇರಿಯವರೆಗೆ ಜೋಡೆತ್ತಿನ ಬಂಡಿಯಲ್ಲಿ ವಿವಿಧ ವಾದ್ಯ ಮೇಳಗಳ ಮೂಲಕ ಸಾವಿರಾರು ಉದಪುಡಿ ಪರಿವಾರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ತಿಮ್ಮಾಪೂರ ಅಭಿಮಾನಿಗಳು ಬೃಹತ್ ಮೆರವಣಿಗೆ ನಡೆಸಲಾಯಿತು.
ಮಕ್ಕಳು ಕೇಕ್ ಕಟ್ ಮಾಡಿ ಸಚಿವರಿಗೆ ತಿನಿಸುವ ಮೂಲಕ ಹುಟ್ಟುಹಬ್ಬ ಹಾಗೂ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತರ ಕರ್ನಾಟಕ ಜಾನಪದ ಟ್ರೆಂಡ್ ಮ್ಯೂಜಿಕ್ ಮೈಲಾರಿ ಹಾಗೂ ಸಂಗಡಿಗರಿಂದ ಸಚಿವ ತಿಮ್ಮಾಪೂರ ಮತ್ತು ದಿ.ಮಹಾಂತೇಶ ಉದಪುಡಿ ಅವರ ಹೆಸರಿನ ಮೇಲೆ ಗೀತೆ ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.ಸಚಿವರು ಕಾರ್ಯಕ್ರಮವನ್ನು ಕಂಡು ಭಾವನಾತ್ಮಕವಾಗಿ ಮಾತನಾಡಿ, ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಖುಣಿ. ಮುಧೋಳ ಮತಕ್ಷೇತ್ರದ ಜನತೆಯ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಸುಮಾರು ೩೫ ವರ್ಷಗಳಿಂದ ನನ್ನ ಸೋಲು ಮತ್ತು ಗೆಲುವಿನಲ್ಲಿ ನನ್ನ ಜೊತೆ ಇರುವ ರೈತರು, ತಾಯಂದಿರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಕೋಟಿ ಕೋಟಿ ನಮನ ಸಲ್ಲಿಸಿ ಭಾವುಕರಾದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ತಿಮ್ಮಾಪೂರ ಅವರು ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿ ಮತ್ತು ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಮುಂದಾಳತ್ವ ವಹಿಸಿ ಸಹಾಯ ಸಹಕಾರ ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಗಟ್ಟಿ ಧ್ವನಿಯಾಗಿ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಸಂತ್ರಸ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.ಮಾಜಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಲೋಕಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಲೋಕಾಪುರ ಪಟ್ಟದ ಸಂಚಾರದ ಜನದಟ್ಟಣೆ ತಪ್ಪಿಸಲು ಬೈಪಾಸ್ ರಸ್ತೆ ಮಾಡಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದಾರೆ, ಮುಧೋಳ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಸಚಿವರಿಗೆ ಎಲ್ಲರೂ ಕೈ ಜೊಡಿಸೋಣ ಎಂದು ತಿಳಿಸಿದರು.
ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಉದಯ ಸಾರವಾಡ, ಗುರುರಾಜ ಉದಪುಡಿ, ಲೋಕಣ್ಣ ಕೊಪ್ಪದ, ಹೊಳಬಸು ದಂಡಿನ, ಲಕ್ಷ್ಮಣ ಮಾಲಗಿ, ಆನಂದ ಹಿರೇಮಠ, ರವಿ ಬೋಳಿಶೆಟ್ಟಿ, ಮುತ್ತಪ್ಪ ಚೌಧರಿ, ಸಚೀನಗೌಡ ಪಾಟೀಲ, ಅಯ್ಯಪ್ಪಗೌಡ ಪಾಟೀಲ, ಬೀರಪ್ಪ ಮಾಯಣ್ಣವರ, ಷಣ್ಮುಖಪ್ಪ ಕೋಲ್ಹಾರ, ಸದಾಶಿವ ಉದಪುಡಿ, ಬಸವರಾಜ ಕಾತರಕಿ, ಮಹಾನಿಂಗ ಹುಂಡೇಕಾರ, ರವಿ ರೊಡ್ಡಪ್ಪನವರ, ರೆಹೆಮಾನ್ ತೊರಗಲ್, ಜಾವೀದ್ ಮುಧೋಳ, ಸಿದ್ದು ಕಿಲಾರಿ, ಕುಮಾರ ಸಿರಗುಂಪಿ, ದುರ್ಗಪ್ಪ ಕಾಳಮ್ಮನವರ, ಕುಮಾರ ಕಾಳಮ್ಮನವರ, ಶಬ್ಬೀರಿ ಗುಳೆದಗುಡ್ಡ, ಸುಲ್ತಾನ್ ಕಲಾದಗಿ, ಶಾಂತೇಶ ಬೋಳಿಶೆಟ್ಟಿ ಮತ್ತು ಉದಪುಡಿ ಪರಿವಾರದ ಹಾಗೂ ತಿಮ್ಮಾಪುರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.