ರೈತರಿಂದ ಕಮಿಷನ್‌ ಪಡೆಯದಂತೆ ಸಚಿವರ ಎಚ್ಚರಿಕೆ

KannadaprabhaNewsNetwork |  
Published : Sep 27, 2025, 12:00 AM IST
ಏಜೆಂಟು  | Kannada Prabha

ಸಾರಾಂಶ

ರೈತರಿಂದ ಪರಿಹಾರದ ಹಣವನ್ನು ತೆಗೆದುಕೊಂಡು ಜೀವನ ನಡೆಸುವ ಜಾಯಮಾನ ನನ್ನದಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವಂತೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ. ಆದರೆ ಕೆಲವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಸಚಿವ ಸುಧಾಕರ್‌ ಆರೋಪ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಭೂ ಸಂತ್ರಸ್ತ ರೈತರಿಗೆ ಸರ್ಕಾರ ನೀಡಿರುವ ಪರಿಹಾರ ವಿತರಿಸುವಲ್ಲಿ ಕಮಿಷನ್‌ಪಡೆಯದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಹಾಗೂ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಕೈಗಾರಿಕಾ ಪ್ರದೇಶಕ್ಕೆ ಭೂಮಿ ನೀಡಿದ ರೈತರಿಗೆ ನೀಡುವ ಪರಿಹಾರದಲ್ಲಿ ಶೇ. 5ರಷ್ಟು ಹಣವನ್ನು ಸಚಿವರಿಗೆ ಸಂದಾಯ ಮಾಡಲು ಅಧಿಕಾರಿಗಳು ಕಮಿಷನ್‌ ಪಡೆಯುತ್ತಿದ್ದಾರೆಂದು ಮಾಜಿ ಶಾಸಕರು ಮಾಡಿದ ಆರೋಪವನ್ನು ಸಚಿವರು ತಳ್ಳಿಹಾಕಿದವರು.

ಅಧಿಕಾರಿಗಳಿಗೆ ಕಮಿಷನ್‌ ನೀಡಬೇಡಿ

ತಾಲೂಕಿನ ಮೈಲಾಂಡಹಳ್ಳಿ, ಚಿಕ್ಕಪುರ, ದೊಡ್ಡಗಂಜೂರು, ಜಿ.ಕೋಡಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸೇರಿದಂತೆ ೨೭.೫ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ ಸಚಿವರು, ರೈತರು ಅಧಿಕಾರಿಗಳಿಗೆ ಹಣ ನೀಡದಂತೆ ಮನವಿ ಮಾಡಿದರು.

ವಿಧಾನಸಭಾ ಕ್ಷೇತ್ರವನ್ನು ೧೦ ವರ್ಷಗಳ ಕಾಲ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಆಡಳಿತ ನಡೆಸಿದ್ದು ಅವರು ಮಾಡಲಾಗದ ಕೆಲಸಗಳನ್ನು ಜನರ ಆಶೀರ್ವಾದದಿಂದ ಶಾಸಕನಾಗಿ, ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇದನ್ನು ಸಹಿಸಲಾಗದವರು ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾತೆಗೆ ನೇರ ವರ್ಗಾವಣೆ

ತಾವು ೨೦೨೩ರಲ್ಲಿ ಶಾಸಕನಾಗಿ ಗೆದ್ದ ನಂತರ ಮತ್ತೆ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪಣತೊಟ್ಟು ಈಗ ಒಂದು ಹಂತಕ್ಕೆ ತಂದಿದ್ದೇನೆ.ರೈತರಿಂದ ಪರಿಹಾರದ ಹಣವನ್ನು ತೆಗೆದುಕೊಂಡು ಜೀವನ ನಡೆಸುವ ಜಾಯಮಾನ ನನ್ನದಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವಂತೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ. ಆದರೆ ಕೆಲವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಹಿಂದಿನ ಶಾಸಕರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ವಿವರಿಸಲಿ ಎಂದು ಸವಾಲು ಹಾಕಿದರು.

ಮಸ್ತೇನಹಳ್ಳಿ ಹಾಗೂ ಅಕ್ಕಪಕ್ಕದ ರೈತರಿಗೆ ಸರ್ಕಾರದಿಂದ ೨೫ ಲಕ್ಷ ಹಣ ಕೊಡೆಸುವುದಾಗಿ ಭರವಸೆ ನೀಡಿ ಮಾಜಿ ಶಾಸಕರು ಅವರಿಂದ ಓಟ್ ಹಾಕಿಸಿಕೊಂಡು ಅಧಿಕಾರಿಗಳಿಂದ ಹಣ ಪಡೆದಿರುವವರು ಅವರು. ಕಮಿಷನ್‌ ಏಜೆಂಟ್‌ಗಳನ್ನು ಸೃಷ್ಟಿ ಮಾಡಿದವರು ಯಾರೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿಗೆ ಸಚಿವರು ಪ್ರಶ್ನಿಸಿದರು.

ಸಂಸದರ ವಿರುದ್ಧ ಆರೋಪ

ಸಂಸದ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಆರೋಗ್ಯ ಮಂತ್ರಿ ಆಗಿದ್ದಾಗ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎಂಆರ್‌ಐ ತರುವ ಯೋಗ್ಯತೆ ಅವರಿಗಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ೨೭ ಮಂದಿ ಅಮಾಯಕರ ಪ್ರಾಣ ಹೋಗಲು ಇವರೇ ಕಾರಣ ಹಾಗೂ ಕುಡಿದ ನಶೆಯಲ್ಲಿರುವ ಅಧಿಕಾರಿಗಳಿಂದ ಕಡತಗಳಿಗೆ ಸಹಿ ಹಾಕಿಸುವಂತಹ ವ್ಯಕ್ತಿ ಯಾರದೂ ಇದ್ದರೆ ಅದು ಡಾ.ಕೆ.ಸುಧಾಕರ್ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕುರುಬೂರು ಗ್ರಾ.ಪಂ. ಅಧ್ಯಕ್ಷ ನಂಜೇಗೌಡ, ಈರುಳ್ಳಿ ಶಿವಣ್ಣ, ಕೃಷ್ಣಮೂರ್ತಿ, ಟಿಎಪಿಎಂಸಿ ನಂಜುಂಡೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆನಂದ್, ಗ್ರಾಮ ಪಂಚಾಯತಿ ಸದಸ್ಯ ನರೇಂದ್ರಗೌಡ, ಇಂಜಿನಿಯರ್ ಗಿರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ತಾ.ಪಂ.ಇಒ ಎಸ್.ಆನಂದ್, ಎಇಇ ನಾಗರಾಜ್, ಸತ್ಯನಾರಾಯಣರೆಡ್ಡಿ, ಲೋಕೇಶ್, ನರಸಿಂಹಮೂರ್ತಿ, ಪಿಡಿಒ ಶ್ರೀನಾಥ್ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ