ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಕ್ತಿ ತುಂಬಿದ ಸಚಿವ ಜಮೀರ್ ಅಹ್ಮದ್‌ ಖಾನ್

KannadaprabhaNewsNetwork | Published : May 4, 2024 12:35 AM

ಸಾರಾಂಶ

ರಾಜ್ಯ ವಕ್ಫ್‌ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿದಂತೆ ನಾಯಕರನ್ನು ಜತೆಗೂಡಿಸಿಕೊಂಡು ಎರಡೂ ಕ್ಷೇತ್ರಗಳಲ್ಲಿ ಮುತವಲ್ಲಿಗಳ ಸಮಾವೇಶ

ಬಳ್ಳಾರಿ: ಬಳ್ಳಾರಿಹತ್ತು ದಿನಗಳ ಕಾಲ ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭೆ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಎರಡೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರೂ ಆದ ಜಮೀರ್ ಅಹಮದ್ ಖಾನ್ ಅವರು ರಾಜ್ಯದೆಲ್ಲೆಡೆ ಪ್ರಚಾರ ನಡೆಸುವ ಹೊಣೆಗಾರಿಕೆ ನಡುವೆಯೂ ಹೈಕಮಾಂಡ್, ಸೂಚನೆ ಮೇರೆಗೆ ಉಸ್ತುವಾರಿ ಜಿಲ್ಲೆ ವಿಜಯನಗರ ವ್ಯಾಪ್ತಿ ಒಳಪಡುವ ಬಳ್ಳಾರಿ ಹಾಗೂ ಕೊಪ್ಪಳ ಕ್ಷೇತ್ರಗಳಲ್ಲಿ ಹದಿನೈದು ಸಾರ್ವಜನಿಕ ಸಭೆ, ಹತ್ತು ರೋಡ್ ಶೋ, ಇಪ್ಪತ್ತಕ್ಕೂ ಹೆಚ್ಚು ಸಮುದಾಯವಾರು ಆಂತರಿಕ ಸಭೆ ನಡೆಸಿ ಎರಡೂ ಕ್ಷೇತ್ರಗಳಲ್ಲಿ ನಾಯಕರ ನಡುವೆ ಸಮನ್ವಯ ಮೂಡಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

ರಾಜ್ಯ ವಕ್ಫ್‌ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿದಂತೆ ನಾಯಕರನ್ನು ಜತೆಗೂಡಿಸಿಕೊಂಡು ಎರಡೂ ಕ್ಷೇತ್ರಗಳಲ್ಲಿ ಮುತವಲ್ಲಿಗಳ ಸಮಾವೇಶ, ಮುಸ್ಲಿಂ ಮುಖಂಡರ ಸಭೆ ನಡೆಸಿ ಸಮುದಾಯದ ಮತಗಳು ಕಾಂಗ್ರೆಸ್ ಪರ ಗಟ್ಟಿಯಾಗಿ ನಿಲ್ಲುವಂತೆ ಮಾಡಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ.ತುಕಾರಾಂ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್ ನಾಮಪತ್ರ ಸಲ್ಲಿಕೆ ದಿನ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ದಿನದಿಂದ ಜತೆಗೂಡಿ ನಿರಂತರವಾಗಿ ಎರಡೂ ಕ್ಷೇತ್ರಗಳ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ಶಾಸಕರು ಹಾಗೂ ಮಾಜಿ ಶಾಸಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಸೇರಿದಂತೆ ಪ್ರಮುಖ ನಾಯಕರ ಜತೆಗೂಡಿ ಪ್ರಚಾರ ನಡೆಸಿ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ತುಂಬಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹೂವಿನಹಡಗಲಿ, ಕಂಪ್ಲಿ, ಸಂಡೂರು, ಬಳ್ಳಾರಿ, ಕೊಪ್ಪಳ ಕ್ಷೇತ್ರದ ಸಿಂಧನೂರು, ಸಿರಗುಪ್ಪ, ಕೊಪ್ಪಳ ಭಾಗಗಳಲ್ಲಿ ಜಮೀರ್ ಅಹ್ಮದ್ ಖಾನ್ 10 ದಿನಗಳ ಪ್ರವಾಸ ಮಾಡಿದ ಸಂದರ್ಭದಲ್ಲಿ ಹಲವಾರು ಪ್ರಮುಖ ನಾಯಕರು ಇವರ ನಾಯಕತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ಬಲ ತಂದುಕೊಟ್ಟಿದೆ.

ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ: ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭೆ ಕ್ಷೇತ್ರಗಳಲ್ಲಿ 7.50 ಲಕ್ಷ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಎರಡೂ ಕಡೆ ಪ್ರಭಾವ ಬೀರಿರುವ ಸಚಿವ ಜಮೀರ್ ಅಹ್ಮದ್ ಖಾನ್ ಸಾರ್ವಜನಿಕ ಸಭೆ, ರೋಡ್ ಶೋ ಜತೆಗೆ ಎರಡೂ ಜಿಲ್ಲೆಯಲ್ಲಿ ನಡೆಸಿದ ಮುತವಲ್ಲಿಗಳ ಸಮಾವೇಶ ಅಲ್ಪಸಂಖ್ಯಾತ ಸಮುದಾಯದ ಮತಗಳ ಕ್ರೋಡೀಕರಣಕ್ಕೆ ಯತ್ನಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಕ್ತಿ ಬಂದಂತಾಗಿದೆ ಎಂದು ಮುಖಂಡರು ಹೇಳುತ್ತಾರೆ.

Share this article