ಹಂಪಿ: ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಚಾಲನೆ ನೀಡಿದರು.
ಆನಂತರ ಕುರುವತ್ತಿ ಬಸವೇಶ್ವರ ಪ್ರತಿಕೃತಿ, ಸಿರಿಧಾನ್ಯಗಳಿಂದ ನಿರ್ಮಿಸಲಾಗಿರುವ ನೇಗಿಲು ಹಿಡಿದ ರೈತ ಹಾಗೂ ಕೃಷಿ ಇಲಾಖೆಯ ಮುಖ್ಯ ಯೋಜನೆಗಳನ್ನು ವೀಕ್ಷಿಸಿದರು. ಈ ವೇಳೆ ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮತ್ತಿತರರಿದ್ದರು.
95 ಮೀನು ತಳಿಗಳ ಆಕರ್ಷಕ ಪ್ರದರ್ಶನ: ಗತವೈಭವ ಸಾರುವ ಹಂಪಿ ಉತ್ಸವದ ಮತ್ಸ್ಯ ಮೇಳದಲ್ಲಿ 95 ಬಗೆಯ ಮೀನುಗಳ ಪ್ರದರ್ಶನ ಮಾಡಲಾಗಿತ್ತು. 10 ವಿವಿಧ ಬಗೆಯ ಸಮುದ್ರ ಮೀನುಗಳು ಆಕರ್ಷಕವಾಗಿದ್ದವು.ಪಂಜರ ಮೀನು ಕೃಷಿ, ಮೀನು ಮಾರಲು ಮೀನು ಮಾರಾಟಗಾರರಿಗೆ ನೀಡುವ ವಾಹನ ಪ್ರದರ್ಶನ, ಸುರಂಗ ಮತ್ಸ್ಯಾಲಯ ಹೀಗೆ ವಿವಿಧ ಹಾಗೂ ಬಣ್ಣ ಬಣ್ಣಗಳ ಆಕರ್ಷಕ ಮೀನುಗಳು ಕಣ್ಮನ ಸೆಳೆಯುತ್ತವೆ.
ಮತ್ಸ್ಯಮೇಳವನ್ನು ಸಚಿವ ಜಮೀರ ಅಹ್ಮದ್ ಉದ್ಘಾಟಿಸಿದರು. ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಉಪಸ್ಥಿತರಿದ್ದರು.