ಅಂಬೇಡ್ಕರ್ ಜಯಂತಿಗೂ ಸಚಿವರು, ಶಾಸಕರಿಗೆ ಪುರುಸೊತ್ತಿಲ್ಲ

KannadaprabhaNewsNetwork | Published : Apr 15, 2025 12:45 AM

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಉದ್ಘಾಟಿಸಿದರು. ಸ್ಥಳೀಯ ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ಅವರೂ ಬರಲಿಲ್ಲ.

ಕಾರವಾರ: ಸಂಸತ್ತು, ವಿಧಾನಸೌಧದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹೆಸರಿನಲ್ಲಿ ಭಾರಿ ಜಟಾಪಟಿ ನಡೆಸುವ ಜನಪ್ರತಿನಿಧಿಗಳು ಅದೇ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳದೆ ಇರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಸಂವಿಧಾನದ ಪುಸ್ತಕವನ್ನೇ ಹಿಡಿದು ಓಡಾಡುವವರ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಬಾರದೆ ಇರುವುದು ದಲಿತ ಸಂಘಟನೆಗಳ ಬೇಸರಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬೇಡ್ಕರ್ ದಿನಾಚರಣೆಯನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಉದ್ಘಾಟಿಸಿದರು.

ಸ್ಥಳೀಯ ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ಅವರೂ ಬರಲಿಲ್ಲ. ಅವರ ಬದಲು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧ್ಯಕ್ಷತೆ ವಹಿಸಿದರು. ಸಚಿವರು, ಬೇರೆ ಕ್ಷೇತ್ರಗಳ ಶಾಸಕರು ದೂರದಿಂದ ಬರಬೇಕು ಎನ್ನೋಣ. ಆದರೆ ಸ್ಥಳೀಯ ಶಾಸಕರು ಏಕೆ ಬರಲಿಲ್ಲ? ಅವರಾದರೂ ಬರಬೇಕಿತ್ತು ಎಂಬ ಮಾತುಗಳು ಕೇಳಿಬಂದವು.

ಇನ್ನು ಅತಿಥಿಗಳಾಗಿ ಸಂಸದರು, ಎಲ್ಲ ಶಾಸಕರ ಹೆಸರನ್ನೂ ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿತ್ತು. ಆದರೆ ಯಾರೊಬ್ಬರೂ ಬರಲಿಲ್ಲ. ದಲಿತ ಮುಖಂಡರೊಬ್ಬರು ಇದನ್ನು ಸಮಾರಂಭದಲ್ಲೇ ಪ್ರಸ್ತಾಪಿಸಿದರು.

ಯಾವುದೇ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಕದೆ ಇದ್ದಲ್ಲಿ ವಿಧಾನಸೌಧ, ಜಿಪಂ ಸಭೆ ಹಾಗೂ ಇತರ ಸಭೆಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ, ಹಕ್ಕುಚ್ಯುತಿಯಾಗಿದೆ ಎಂದು ಅಬ್ಬರಿಸುವ ಜನಪ್ರತಿನಿಧಿಗಳು ಮಹಾನ್ ನಾಯಕರ ಜಯಂತಿಗಳ ಆಹ್ವಾನ ಪತ್ರಿಕೆಗಳಲ್ಲಿ ಪ್ರತಿ ಬಾರಿ ಹೆಸರಿದ್ದರೂ ಸೌಜನ್ಯಕ್ಕಾಗಿಯಾದರೂ ಅತ್ತ ಸುಳಿಯುವುದಿಲ್ಲ. ಡಾ. ಅಂಬೇಡ್ಕರ್ ಅವರಂತಹ ನಾಯಕರ ಜಯಂತಿಗೂ ಬಾರದೆ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಬೇಸರದ ಸಂಗತಿ: ಸಚಿವರು, ಶಾಸಕರು ಆಗಮಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರೂ ಸಾಕಿತ್ತು. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಮೀಸಲಾತಿಯಿಂದ ಗೆದ್ದು ಬಂದ ಇವರು ಅಂಬೇಡ್ಕರ್ ಜಯಂತಿಗೆ ಬಾರದೆ ಇರುವುದು ಬೇಸರದ ಸಂಗತಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ದೀಪಕ ಕುಡಾಳಕರ ಹೇಳಿದರು.

Share this article