ಸಚಿವರು ಸುವರ್ಣ ಸೌಧದಲ್ಲೇ ತಿಂಗಳಿಗೊಮ್ಮೆ ಸಭೆ ನಡೆಸಲಿ

KannadaprabhaNewsNetwork |  
Published : Dec 11, 2025, 03:00 AM IST
ಮಲ್ಲಿಕಾರ್ಜುನ ಕೆಂಗನಾಳ | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸರ್ವ ಸಚಿವರು ತಿಂಗಳಗೊಮ್ಮೆಯಾದರೂ ತಮ್ಮ ಇಲಾಖೆವಾರು ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಉನ್ನತಮಟ್ಟದ ಸಭೆಗಳನ್ನು ನಡೆಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕಕ್ಕೆ ಸಂಬಂಧಿಸಿದ ಉತ್ತರ ಕರ್ನಾಟಕದ ಸರ್ವ ಸಚಿವರು ತಿಂಗಳಗೊಮ್ಮೆಯಾದರೂ ತಮ್ಮ ಇಲಾಖೆವಾರು ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಉನ್ನತಮಟ್ಟದ ಸಭೆಗಳನ್ನು ನಡೆಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ಪತ್ರಿಕಾ ಪ್ರಟಣೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿಯೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಲಾಗಿದ್ದರೂ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಇಲ್ಲಿಯವರೆಗೆ ನಡೆದ ಹಲವಾರು ಅಧಿವೇಶನಗಳಲ್ಲಿ ತಾರ್ಕಿಕ ಚರ್ಚೆ ನಡೆದೇ ಇಲ್ಲ. ಹಾಗೆಯೇ ಅಂತಹ ಮಹತ್ವದ ಅಭಿವೃದ್ಧಿ ಯೋಜನೆಗಳು, ಸಮಸ್ಯೆಗಳಿಗೆ ಪರಿಹಾರಗಳು ಘೋಷಣೆ ಆಗಿರುವ ಇತಿಹಾಸ ಇಲ್ಲವೇ ಇಲ್ಲ ಎಂದು ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆದರೇ ಕೇವಲ ಪ್ರತಿಭಟನೆಗಳೇ ಹೆಚ್ಚು ಸುದ್ದಿ ಮಾಡುತ್ತವೆ, ಪ್ರತಿಭಟನೆಗಳ ಬಿಸಿ ಎಲ್ಲರಿಗೂ ತಟ್ಟುತ್ತದೆ ಎನ್ನುವುದಕ್ಕೆ ಮೂಲ ಕಾರಣವೇ ನಮ್ಮ ಉತ್ತರ ಕರ್ನಾಟಕದ ಸಚಿವರು. ಅವರು ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೇ ಯಾವ ಹೋರಾಟಗಾರರು ಸರ್ಕಾರದ ಕಣ್ಣು ತೆರೆಸಲು ಬೀದಿಗೆ ಇಳಿದು ಹೋರಾಟ ಮಾಡುವ ಅನಿವಾರ್ಯತೆಯೇ ಬರುತ್ತಿರಲಿಲ್ಲ. ಇಲ್ಲಿಯವರೆಗೆ ನಡೆದ ಚಳಿಗಾಲದ ಅಧಿವೇಶನಗಳಲ್ಲಿ ಉತ್ತರಕರ್ನಾಟಕದ ಯಾವುದೇ ಸಮಸ್ಯೆಗಳು ಕಾಣದೇ ಭವಿಷ್ಯದಲ್ಲಿ ನವ ಕರ್ನಾಟಕದ ಯೋಜನೆಗಳು ಅನುಷ್ಠಾನವಾಗುವ ಹಂತಕ್ಕೆ ಬಂದು ನಿಲ್ಲುತ್ತಿದ್ದವು ಎಂದರು.

ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಕೆಲವೊಂದು ಇಲಾಖೆಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕೆನ್ನುವ ಬಹುಬೇಡಿಕೆಗಳು ಇಲ್ಲಿಯವರೆಗೆ ಈಡೇರಿಸಿಲ್ಲ. ತಾಂತ್ರಿಕ ನೆಪವೊಡ್ಡಿ ಹಾರಿಕೆಯ ಉತ್ತರದಲ್ಲಿಯೇ ಪ್ರತಿ ಅಧಿವೇಶ ನಡೆಯುತ್ತಿವೆ. ಹೀಗಾಗಿ ಕೊನೆಪಕ್ಷ ಇಲಾಖೆಗಳನ್ನು ಸ್ಥಳಾಂತರ ಮಾಡದೇ ಹೋದರೂ ನಮ್ಮ ಉತ್ತರ ಕರ್ನಾಟಕದ ಸಚಿವರು ತಮ್ಮ ಇಲಾಖೆವಾರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಈ ಮೂಲಕ ಬೆಂಗಳೂರು ಕೇಂದ್ರಿತ ಅಧಿಕಾರಿಗಳು ಉತ್ತರ ಕರ್ನಾಟಕಕ್ಕೆ ಬರುವುದರಿಂದ ಇಲ್ಲಿನ ಸಮಸ್ಯೆಗಳ ಆಳ, ಜ್ಞಾನ ಪಡೆದುಕೊಳ್ಳುವುದಲ್ಲದೇ ಶಾಶ್ವತ ಪರಿಹಾರಗಳ ರೂಪರೇಷಗಳನ್ನು ಸಿದ್ಧ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿವರ್ಷ ನಡೆಯುವ ಚಳಿಗಾಲ ಅಧಿವೇಶನದಲ್ಲಿಯೇ ಹೊಸ ಯೋಜನೆ ಹಾಗೂ ಸಮಸ್ಯೆಗಳಿಗೆ ಶಾಸ್ವತ ಪರಿಹಾರಗಳ ಘೋಷಣೆ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನಡೆಯುವ ಅಧಿವೇಶದಲ್ಲಿ ಹೊಸ ಜಿಲ್ಲೆಗಳು ಘೋಷಣೆಯಾಗಬೇಕು. ಈಗಾಗಲೇ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಅಥಣಿ ಸೇರಿದಂತೆ ಇಂಡಿ, ಬಸವನಬಾಗೇವಾಡಿಗಳಂತ ದೊಡ್ಡ ದೊಡ್ಡ ಪಟ್ಟಣಗಳು ಜಿಲ್ಲಾ ಸ್ಥಾನಮಾನಕ್ಕೆ ಬಂದು ನಿಂತಿದ್ದು, ಇದಕ್ಕೆ ಈಗಾಗಲೇ ಹಲವು ವರ್ಷಗಳಿಂದ ಹೋರಾಟ ಮುಂದುವರೆದುಕೊಂಡು ಬಂದಿದೆ. ಹೋರಾಟಗಾರರ ಆಕ್ರೋಶಕ್ಕೆ ಸರ್ಕಾರ ಗುರಿಯಾಗದೇ ಸ್ಥಳೀಯ ಮುಖಂಡರ ಹಾಗೂ ವರದಿಗಳಿಗೆ ಅನುಗುಣವಾಗಿ ಆದಷ್ಟು ಬೇಗ ಜಿಲ್ಲೆಗಳನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಘೋಷಣೆ ಮಾಡಿದ ಹೊಸ ತಾಲೂಕುಗಳಿಗೆ ಕಚೇರಿಗಳು ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಾಗಿದ್ದು, ಅಂತಹ ಕಾರ್ಯಗಳು ಪೂರ್ಣಗೊಳ್ಳದೇ ಕುಂಟುತ್ತ ಸಾಗಿವೆ. ಕೇವಲ ತಾಲೂಕು ಘೋಷಣೆ ಕಾಗದಲ್ಲಿಯೇ ಮಾತ್ರ ಇದ್ದು, ಅವುಗಳು ಕಾರ್ಯಗತವಾಗಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾದ ಕಚೇರಿಗಳೇ ಇಲ್ಲದಿರುವುದು ಸರ್ಕಾರದ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ