ಮನರೇಗಾ ಯೋಜನೆಯನ್ನು ಕುಲಗೆಡಿಸಿ ಅದಕ್ಕೆ ರಾಮನ ಹೆಸರು ಸೇರಿಸಿ ಜನರ ಭಾವನೆಗಳೊಂದಿಗೆ ಆಟವಾಡಿ, ಮೌಢ್ಯವನ್ನು ಬಿತ್ತುವ ಕೆಲಸ
ಉಡುಪಿ: ಬಿಜೆಪಿಯವರಿಗೆ ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿಯೂ ಇಲ್ಲ, ಆಸಕ್ತಿಯೂ ಇಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಗಳನ್ನೆಲ್ಲ ಸಾಯಿಸುವ ಮೂಲಕ ಮತ್ತೆ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ. ಬಿಜೆಪಿ ದೇಶದ ಅಭಿವೃದ್ದಿಗೆ ರಿವರ್ಸ್ ಗೇರ್ ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿದರು.
ಮನರೇಗಾ ಯೋಜನೆಯನ್ನು ಕುಲಗೆಡಿಸಿ ಅದಕ್ಕೆ ರಾಮನ ಹೆಸರು ಸೇರಿಸಿ ಜನರ ಭಾವನೆಗಳೊಂದಿಗೆ ಆಟವಾಡಿ, ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.ನರೇಗಾ ಯೋಜನೆಯಲ್ಲಿ ಲೋಪವಿದ್ದರೆ ಸರಿಪಡಿಸಿ, ಶಕ್ತಿ ತುಂಬುವ ಬದಲು ಈ ಜನಪರ, ಜನಪ್ರಿಯ ಯೋಜನೆಯನ್ನೇ ಮುಗಿಸುತಿದ್ದಾರೆ. ರೋಗಿಗೆ ಚಿಕಿತ್ಸೆ ನೀಡುವ ಬದಲು ರೋಗಿಯನ್ನೇ ಸಾಯಿಸಲು ಹೊರಟಿದ್ದಾರೆ. ಯೋಜನೆಯಲ್ಲಿ ಭ್ರಷ್ಟಾಚಾರವಾಗಿದ್ದರೆ ಕಳೆದ 12 ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೂ ಯೋಜನೆಯಲ್ಲಿ ಯಾವೊಂದು ಸುಧಾರಣೆ ಮಾಡದೆ ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಯೋಜನೆಯನ್ನೇ ನೇಣಿಗೆ ಹಾಕಲು ಹೊರಟಿದ್ದಾರೆ. ಅಂದರೆ ಇಷ್ಟು ವರ್ಷ ಅವರು ಭ್ರಷ್ಟಾಚಾರದಲ್ಲಿ ಭಾಗಯಾಗಿದ್ದರೆ ? ಎಂದು ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ. ದೇಶದ ಸುಮಾರು 12 ಕೋಟಿ ಬಡ ಜನರು, ಕಾರ್ಮಿಕರು, 6 ಕೋಟಿ ಮಹಿಳಾ ಕಾರ್ಮಿಕರು, 3 ಕೋಟಿ ಪರಿಶಿಷ್ಟ ಜಾತಿ, ವರ್ಗದ ಜನರು ಜೀವನೋಪಾಯಕ್ಕಾಗಿ 20 ವರ್ಷಗಳಿಂದ ನರೇಗಾ ಯೋಜನೆಯನ್ನೇ ಅವಲಂಬಿಸಿದ್ದಾರೆ. ಈಗ ಬಿಜೆಪಿಯವರು ಈ ಯೋಜನೆಯನ್ನೇ ಕೊಲ್ಲಲು ಹೊರಟಿದ್ದಾರೆ. ಬಡವರು ಬಡವರಾಗಿ, ಜೀತದಾಳಾಗಿಯೇ ಇರಬೇಕು, ಮಹಿಳೆಯರು ಸಬಲೀಕರಣಗೊಳ್ಳಬಾರದು, ಸಮಾಜದ ಮುಖ್ಯ ವಾಹಿನಿಗೆ ಬರಬಾರದು ಎನ್ನುವ ಮನೋಸ್ಥಿತಿ ಬಿಜೆಪಿಯವರದ್ದು ಎಂದು ಅವರು ಕಟುವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.