ಹುಬ್ಬಳ್ಳಿ: ರಾಜ್ಯದಲ್ಲಿ 140 ಶಾಸಕರನ್ನು ಒಳಗೊಂಡಿರುವ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಹೀಗಾಗಿ ಪಕ್ಷದಲ್ಲಿ ಕೆಲವು ಸಣ್ಣ-ಪುಟ್ಟ ಅಸಮಾಧಾನ ಇರುವುದು ಸಹಜ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ‍್ಯಾರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ. ಪಕ್ಷದ ಮುಖಂಡರಾದ ಸುರ್ಜೇವಾಲಾ ಅವರು ಅಸಮಾಧಾನಿತರೊಂದಿಗೆ ಮಾತನಾಡಿ ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಪೆಟ್ರೋಲ್, ಡಿಸೇಲ್ ಮತ್ತು ಸಿನಿಮಾ ಟಿಕೆಟ್ ಮೇಲೆ ಸೆಸ್ ಹಾಕುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಇವುಗಳ ಮೇಲೆ ಸ್ವಲ್ಪ ಸೆಸ್ ಹಾಕುವುದರಿಂದ ಜನರಿಗೆ ಯಾವುದೇ ರೀತಿಯ ಹೆಚ್ಚಿನ ಹೊರೆ ಆಗುವುದಿಲ್ಲ ಎಂದ ಅವರು, ಅನಗತ್ಯವಾಗಿ ಕೆಲವರು ಸೆಸ್ ವಿಷಯದ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಕಲ್ಲಿದ್ದಲು ಇಲಾಖೆಯಲ್ಲಿ ಹಿಂದಿನ ಯುಪಿಎ ಸರ್ಕಾರ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿದೆ ಎಂದು ಕೆಲ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಅವರದೇ ಬಿಜೆಪಿ ಸರ್ಕಾರ ಯುಪಿಎ ಸರ್ಕಾರದಲ್ಲಿ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದು ವರದಿ ನೀಡಿದೆ. ಹಾಲಿ ಕೇಂದ್ರ ಬಿಜೆಪಿ ಸರ್ಕಾರ ಕಳೆದ 11 ವರ್ಷದ ಅವಧಿಯಲ್ಲಿ ಯಾರಿಗೆಲ್ಲಾ ಟೆಂಡರ್ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.ವಿಶ್ವಗುರು ಬಹಳಷ್ಟು ಪವರ್‌ಫುಲ್ ಎಂದು ಕೇವಲ ಹೇಳಿಕೊಂಡು ಅಡ್ಡಾಡಿದರೆ ಸಾಲದು. ಪೆಹಲ್ಗಾಂ ಘಟನೆ ಹಾಗೂ ದೇಶದ ಕೆಲ ಜ್ವಲಂತ ಸಮಸ್ಯೆಯ ಬಗ್ಗೆ ಮೊದಲು ಚರ್ಚೆಯಾಗಬೇಕು. ನಾಲ್ಕೈದು ಉಗ್ರಗಾಮಿಗಳ ಫೋಟೋ ತೋರಿಸಿದ್ದರು. ಅವರ ಕಥೆಯೇನಾಯ್ತು ಎಂಬುದನ್ನು ಚರ್ಚಿಸಬೇಕು ಎಂದರು.
ಚೀನಾ ದೇಶದ ವಸ್ತುಗಳನ್ನು ಬಳಸಬಾರದು ಎಂದು ಮೋದಿ ಹೇಳಿಕೆ ನೀಡುತ್ತಾರೆ. ಆದರೆ, ಇಂದಿಗೂ ಅಲ್ಲಿನ ವಸ್ತುಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಮೋದಿ ಅವರ ಪಕ್ಷದ ವಿದೇಶಿ ಪಾಲಿಸಿ ಫೇಲ್ ಆಗಿದೆ ಎಂದು ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾವಣೆ ಮಾಡಬೇಕು ಎಂದು ಸ್ವತಃ ಬಿಜೆಪಿಯವರೆ ಕೇಳುತ್ತಿದ್ದಾರೆ ಎಂಬ ಮಾಹಿತಿ ನನಗಿದೆ. ವೈಯಕ್ತಿಕ ತಲಾ ಆದಾಯದ ಬಗ್ಗೆ ಬಿಜೆಪಿ ಅವರು ಏಕೆ ಮಾತನಾಡುವುದಿಲ್ಲ ಎಂದು ಲಾಡ್ ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಕುರಿತು ಹೇಳಿರುವ ಅರ್ಥ ಬೇರೆ ಇದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೂ ಪಕ್ಷದ ಕುರಿತು ಮಾಹಿತಿ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಹೈಕಮಾಂಡ್ ಎಂದು ಹೇಳಿರುವುದು ಗೌರವಪೂರಕವಾಗಿ. ಅದನ್ನೇ ಇವರು ದೊಡ್ಡ ಮಟ್ಟದಲ್ಲಿ ಚರ್ಚಿಸುತ್ತಿದ್ದಾರೆ ಎಂದರು.ವೈಯಕ್ತಿಕವಾಗಿ ಮೋದಿ ಅವರನ್ನೂ ನಾವು ಬೈದಿಲ್ಲ, ಹಗುರವಾಗಿ ಮಾತನಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮೊದಲು ನರೇಗಾ ಹಣ ಬಿಡುಗಡೆ ಮಾಡಲಿ: ಕೇಂದ್ರ ಸರ್ಕಾರ ಮೊದಲು ನರೇಗಾ ಹಣ ಬಿಡುಗಡೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಮಹಾನಗರ ಪಾಲಿಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿದರು.ಕೇಂದ್ರದವರು ಮೊದಲು ನರೇಗಾ ಬಿಲ್ ಬಿಡುಗಡೆ ಮಾಡಲಿ. ಕೇಂದ್ರ ನೂರು ಕಡೆ ಸ್ಮಾರ್ಟ್ ಸಿಟಿ ಯೋಜನೆ ಮಾಡಿತು. ಎಷ್ಟು ಸಿಟಿ ಸ್ಮಾರ್ಟ್ ಆಗಿವೆ.? ಹುಬ್ಬಳ್ಳಿಯೂ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿತ್ತು. ಆದರೆ, ಇಲ್ಲಿನ ಡ್ರೈನೇಜ್ ಸ್ಥಿತಿ ಏನಾಗಿದೆ ಎಂದರು.
₹300 ಕೋಟಿ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಇದೇ ರೀತಿ ಹಣವಿಲ್ಲದೆಯೇ 2 ಲಕ್ಷ ಟೆಂಡರ್ ಕರೆದು ಹೋಗಿದ್ದಾರೆ. ಈ ಪ್ರಶ್ನೆಯನ್ನು ಬಿಜೆಪಿ ಅವರನ್ನೇ ಕೇಳಿ ಎಂದರು.