ಹುದ್ದೆಗಳ ಸಮೇತ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಚೇರಿ ನಾಗಮಂಗಲ ಕೇಂದ್ರಕ್ಕೆ ವರ್ಗ

KannadaprabhaNewsNetwork |  
Published : Aug 13, 2024, 12:49 AM IST
12ಕೆಎಂಎನ್ ಡಿ17 | Kannada Prabha

ಸಾರಾಂಶ

ಸಚಿವರಾದ ಆರಂಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾನೆಂದೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಸಚಿವನಾದ ನಾನು ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಹೇಳಿದ್ದರು. ಈಗ ತಾವು ಆಡಿದ ಮಾತನ್ನು ಮರೆತು ಸಣ್ಣಪುಟ್ಟ ವಿಚಾರಗಳಲ್ಲೂ ಕ್ಷೇತ್ರದ ಶಾಸಕರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬೂಕನಕೆರೆಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಚೇರಿಯನ್ನು ಹುದ್ದೆಗಳ ಸಮೇತ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಕ್ಷೇತ್ರದ ನಾಗಮಂಗಲ ಕೇಂದ್ರಕ್ಕೆ ವರ್ಗಾಯಿಸಿಕೊಂಡಿರುವುದನ್ನು ಶಾಸಕ ಎಚ್.ಟಿ.ಮಂಜು ತೀವ್ರವಾಗಿ ಖಂಡಿಸಿದರು.

ಪಟ್ಟಣದ ಬಸವೇಶ್ವರ ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾದ ಆರಂಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾನೆಂದೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಸಚಿವನಾದ ನಾನು ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಹೇಳಿದ್ದರು. ಈಗ ತಾವು ಆಡಿದ ಮಾತನ್ನು ಮರೆತು ಸಣ್ಣಪುಟ್ಟ ವಿಚಾರಗಳಲ್ಲೂ ಕ್ಷೇತ್ರದ ಶಾಸಕರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಿಎಂ ಬಿಎಸ್‌ವೈ ನೀಡಿದ್ದ ಕಚೇರಿ:

ತಾಲೂಕು ವ್ಯಾಪ್ತಿಯಲ್ಲಿ ನೂರಾರು ಕೆರೆಗಳಿವೆ. ತಾಲೂಕಿನ ಕಟ್ಟಹಳ್ಳಿ, ಗೂಡೇ ಹೊಸಹಳ್ಳಿ ಮುಂತಾದ ಕಡೆ ನೂರಾರು ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ಮೂಲಕ ನಡೆಯುತ್ತಿವೆ. ಕ್ಷೇತ್ರದ ಜನರ ಅಗತ್ಯತೆ ಮನಗಂಡು ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 2019ರಲ್ಲಿ ಬೂಕನಕೆರೆಯನ್ನು ಕೆಂದ್ರೀಕರಿಸಿ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಕಾರ್ಯಾಲಯವನ್ನು ಆರಂಭಿಸಿದ್ದರು ಎಂದರು.

ತಾಲೂಕು ವ್ಯಾಪ್ತಿಯಲ್ಲಿದ್ದ ಸಣ್ಣ ನೀರಾವರಿ ಇಲಾಖೆಯನ್ನು ಮಂಜೂರಾತಿಯಾಗಿರುವ ಎಲ್ಲಾ ಹುದ್ದೆಗಳ ಸಮೇತ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಸ್ವ-ಕ್ಷೇತ್ರ ನಾಗಮಂಗಲಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಚಿವರಿಗೆ ಘನತೆಗೆ ತರವಲ್ಲ:

ಸಚಿವರು ತಮ್ಮ ಕ್ಷೇತ್ರಕ್ಕೆ ಸಣ್ಣ ನೀರಾವರಿ ಇಲಾಖೆಯ ಅಗತ್ಯವಿದ್ದರೆ ತಮ್ಮ ಕಾರ್ಯದಕ್ಷತೆ ಪ್ರದರ್ಶಿಸಿ ಮತ್ತೊಂದು ಶಾಖೆಯನ್ನು ಮಂಜೂರು ಮಾಡಿಸಿಕೊಳ್ಳಲಿ. ಅದನ್ನು ಬಿಟ್ಟು ಹಾಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯನ್ನು ನಮ್ಮ ಕ್ಷೇತ್ರದಿಂದ ಕಿತ್ತುಕೊಂಡು ತಮ್ಮ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿಕೊಳ್ಳುವುದು ಸಚಿವ ಘನತೆ ಮತ್ತು ಗೌರವಕ್ಕೆ ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಗೆ ಬೇಕಾದ ಯೋಜನೆಗಳನ್ನು ಕೊಡುವ ತಾಕತ್ತಿಲ್ಲದ ರಾಜ್ಯ ಕೃಷಿ ಸಚಿವರು ಕೊಟ್ಟಿದ್ದನ್ನು ಕಿತ್ತುಕೊಳ್ಳುವ ಹೀನ ಮನಸ್ಥಿತಿಗೆ ತಲುಪಿಸಿದ್ದಾರೆ. ತಕ್ಷಣವೇ ನಮ್ಮಿಂದ ಕಿತ್ತುಕೊಳ್ಳಲು ಆದೇಶ ಹೊರಡಿಸಿರುವ ಸಣ್ಣ ನೀರಾವರಿ ಇಲಾಖೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ತಾಲೂಕಿನ ರೈತರ ಹಿತದೃಷ್ಟಿಯಿಂದ ನಾನು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಭಿವೃದ್ಧಿಗೆ ಅಡ್ಡಗಾಲು:

ನನ್ನ ಕ್ಷೇತ್ರದ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಸಣ್ಣ ಪುಟ್ಟ ವಿಚಾರದಲ್ಲೂ ಅಡ್ಡಗಾಲು ಹಾಕಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸದೆ ಸಚಿವರು ಹಲವು ಬಾರಿ ನನ್ನ ಶಾಸಕ ಸ್ಥಾನಕ್ಕೂ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮಂಡ್ಯ ಜಿಲ್ಲೆಯಲ್ಲೆ ಏಕೈಕ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಕೆ.ಆರ್.ಪೇಟೆ ಕ್ಷೇತ್ರದವರು ಎಂಬ ಕಾರಣಕ್ಕೆ ಸಚಿವರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಯಾರಿಗೂ ಅಧಿಕಾರ ಶಾಶ್ವತಲ್ಲ. ಅವರು ಕೂಡ ವಿಪಕ್ಷದಲ್ಲಿ ಶಾಸಕರಾಗಿದ್ದರು ಎನ್ನುವ ಮನಸ್ಸಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕರ್ತರಿಗೆ ಕೃತಜ್ಞತೆ:

ರಾಜ್ಯ ಸರ್ಕಾರದ ವಾಲ್ಮೀಕಿ ನಿಗಮದ ಅವ್ಯವಹಾರ, ಮುಖ್ಯಮಂತ್ರಿಗಳ ಮೈಸೂರು ಮೂಡಾ ಹಗರಣಗಳ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತವಾಗಿ ನಡೆಸಿದ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಶಾಸಕರು ಕೃತಜ್ಞತೆ ಅರ್ಪಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ತಾ.ಪಂ ಮಾಜಿ ಸದಸ್ಯ ಹುಲ್ಲೆಗೌಡ, ಹೊಸಹೊಳಲು ರಾಜು, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಶ್ಯಾಮಣ್ಣ, ಚಟ್ಟೇನಹಳ್ಳಿ ನಾಗರಾಜು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ