ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್‌ ಚಾಲನೆ ಮಾಡಬೇಡಿ

KannadaprabhaNewsNetwork | Published : Jan 12, 2025 1:18 AM

ಸಾರಾಂಶ

ವಾಹನ ಚಲಾಯಿಸುವವರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಾಹನ ಚಲಾಯಿಸುವವರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನ ಮುಖ್ಯವಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್‌ ಚಾಲನೆ ಮಾಡಿದರೆ ಅಪರಾಧ. ಕಾನೂನು ಮೀರಿ ವಾಹನ ಚಾಲನೆ ಮಾಡಿದ ಅಪ್ರಾಪ್ತ ವಯಸ್ಸಿನ ಮಕ್ಕಳ ಪೋಷಕರು ನ್ಯಾಯಾಲಯಕ್ಕೆ ದಂಡ ಕಟ್ಟಬೇಕು. ಚಾಲನಾ ಪರವಾನಗಿ ಹೊಂದಿದ ಹಾಗೂ 18 ವರ್ಷ ತುಂಬಿದವರು ಮಾತ್ರ ವಾಹನ ಚಲಾಯಿಸಬಹುದು. ವೇಗವಾಗಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್‌ಕುಮಾರ್ ಎಂ.ಎನ್. ಮಾತನಾಡಿ, ಸಂಚಾರಿ ನಿಯಮಗಳು, ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದರಿಂದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಚಾರಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಗುರುನಾಥ್ ಐ.ಎಸ್. ಮಾತನಾಡಿ, ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಸಂಭವಿಸಬಹುದಾದ ಅವಗಢ/ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಸಂಚಾರಿ ಠಾಣೆ ಆರಕ್ಷಕ ನಿರೀಕ್ಷಕು ಮಂಗಳ ಗೌರಮ್ಮ ಮಾತನಾಡಿ, ರಸ್ತೆಯಲ್ಲಿ ಯಾವುದೇ ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ನೆರವು ನೀಡುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಮತ್ತು ವಾಹನ ಚಲಾಯಿಸುವ ವೇಳೆಯಲ್ಲಿ ಬಳಸುವ ಚಿಹ್ನೆಗಳ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುನೀತ, ಅಂಬಿಕಾ, ಮಧುಮತಿ, ಮಹೇಶ್, ರಾಜುನಾಯ್ಕ್, ಹೊನ್ನಪ್ಪ, ಲೋಕೇಶ್, ಕಮಲಮ್ಮ, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

Share this article