ಕನ್ನಡಪ್ರಭ ವಾರ್ತೆ ಮೈಸೂರು
ವಿಶಿಷ್ಟ ಯೋಜನೆಯ ಭಾಗವಾಗಿ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮೋರಿಗೆ ಹೊಂದಿಕೊಂಡಂತೆ ಹಾಗೂ ಸರ್ಕಾರಿ ಅತಿಥಿಗೃಹದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಪ್ರಾಯೋಗಿಕವಾಗಿ ಕನ್ನಡಿ ಅಳವಡಿಸಿದೆ.
ಇಲ್ಲಿ ಸಾಮಾನ್ಯವಾಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸಾರ್ವಜನಿಕರು, ದಾರಿಹೋಕರು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು ಈಗ ಕನ್ನಡಿ ಅಳವಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ನಿಂತರೇ ಮೂತ್ರ ವಿಸರ್ಜಿಸುವುದನ್ನು ತಾವೇ ನೋಡುವಂತಾಗುತ್ತದೆ. ಜೊತೆಗೆ ರಸ್ತೆಯಲ್ಲಿ ಓಡಾಡುವ ಜನರಿಗೂ ಕಾಣುತ್ತದೆ. ಇದರಿಂದ ಅನೈರ್ಮಲ್ಯ ತಪ್ಪಿಸಬಹುದು ಎಂಬುದು ನಗರ ಪಾಲಿಕೆ ಯೋಜನೆ ಮತ್ತು ಯೋಚನೆ.ಅಲ್ಲದೆ ರಾತ್ರಿ ವೇಳೆ ಈ ಕನ್ನಡಿಯ ಕೆಳಗೆ ಎಲ್‌ಇಡಿ ಬಲ್ಪ್ ಅಳವಡಿಸಿರುವುದರಿಂದ ರಾತ್ರಿ ವೇಳೆಯೂ ಮೂತ್ರ ವಿಸರ್ಜನೆ ಮಾಡುವುದು ತಪ್ಪಿಸಬಹುದು. ಈ ಕಾರ್ಯ ಯಶಸ್ವಿಯಾದರೆ ನಗರದ ಇತರ ಕಡೆಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಈ ಸಲಹೆಯನ್ನು ಯಾರು ಕೊಟ್ಟರೋ ಏನೋ ಆದರೆ ಉತ್ತಮವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಕನ್ನಡಿ ಅಳವಡಿಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.