ಬಿಬಿಎಂಪಿಯಲ್ಲಿ ₹46 ಸಾವಿರ ಕೋಟಿ ದುರ್ಬಳಕೆ: ದೂರು

KannadaprabhaNewsNetwork |  
Published : Nov 06, 2024, 01:22 AM IST
N R RAMESH | Kannada Prabha

ಸಾರಾಂಶ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆಯಾಗಿರುವ 46,300 ಕೋಟಿ ರು. ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆಯಾಗಿರುವ 46,300 ಕೋಟಿ ರು. ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಮಂಗಳವಾರ ಲೋಕಾಯುಕ್ತ ಸಂಸ್ಥೆಗೆ ₹46,300 ಕೋಟಿ ಅನುದಾನ ದುರ್ಬಳಕೆ ಹಗರಣ ಸಂಬಂಧಿಸಿದಂತೆ 4,113 ಪುಟಗಳ ದಾಖಲೆ ಸಹಿತ ದೂರು ಸಲ್ಲಿಸಿದರು. 2013-14ರಿಂದ 2023-24ರ ಅವಧಿಯಲ್ಲಿ ಪಾಲಿಕೆಯ ಆಯುಕ್ತರು, ಮುಖ್ಯ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ.

ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಮೇಶ್‌, ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈ ಬೃಹತ್ ಹಗರಣದ ತನಿಖೆಯನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

2013-14 ರಿಂದ 2023-24ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ಪಾಲಿಕೆಯ ಯೋಜನೆ ಇಲಾಖೆಯ ವಿಶೇಷ ಆಯುಕ್ತರು, ಮುಖ್ಯ ಎಂಜಿನಿಯರ್‌ ಮತ್ತು ಎಂಟು ವಲಯಗಳ ಮುಖ್ಯ ಎಂಜಿನಿಯರ್‌ ಸೇರಿ ಎಲ್ಲಾ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೇ, ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧವೂ ಸಹ ದೂರು ನೀಡಲಾಗಿದೆ. ಹಗರಣ ಕುರಿತು ಸಂಪೂರ್ಣ ತನಿಖೆ ನಡೆಸಿದರೆ ಅನುದಾನ ದುರ್ಬಳಕೆ ಕುರಿತು ಸತ್ಯಾಂಶ ಹೊರಬರಲಿದೆ ಎಂದರು.

ಕಳೆದ 10 ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ವಿವಿಧ ಅನುದಾನಗಳ ಮೂಲಕ ₹46,300 ಕೋಟಿ ಬಿಡುಗಡೆಯಾಗಿದೆ. ಈ ಬೃಹತ್‌ ಪ್ರಮಾಣದ ಹಣ ಎಲ್ಲಿಗೆ ಹೋಯಿತು? ಯಾರಿಗೆ ತಲುಪಿದೆ? ಎಂಬುದರ ಕುರಿತು ತನಿಖೆಯಾಗಬೇಕು. ನ್ಯಾಯ ಸಮ್ಮತ ತನಿಖೆಯಾಗಬೇಕಾದರೆ ಪ್ರಕರಣವನ್ನು ನ್ಯಾಯಾಂಗದ ತನಿಖೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೃಹತ್ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದರೂ ಸಹ ಕಳೆದ 10 ವರ್ಷಗಳಿಂದ ದೇಶದ ಬೇರಾವುದೇ ನಗರ ಪ್ರದೇಶಗಳಿಗಿಂತಲೂ ಅತಿ ಹೆಚ್ಚು ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. 198 ವಾರ್ಡ್ ವ್ಯಾಪ್ತಿಯ ರಸ್ತೆಗಳು ಮತ್ತು ಮುಖ್ಯರಸ್ತೆಗಳಲ್ಲಿ ಹತ್ತಾರು ಸಾವಿರ ರಸ್ತೆಗುಂಡಿಗಳು ಒಂದರ ಹಿಂದೆ ಒಂದರಂತೆ ಸೃಷ್ಟಿಯಾಗುತ್ತಿರುವುದು ಪಾಲಿಕೆಯಲ್ಲಿನ ಭ್ರಷ್ಟಾಚಾರ ವ್ಯವಸ್ಥೆಗೆ ಅತ್ಯಂತ ಸ್ಪಷ್ಟವಾಗಿ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.

ಬಿಬಿಎಂಪಿ ವ್ಯಾಪ್ತಿಯ ಯಾವುದೇ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದನೆಯಾಗುವ ಮೊದಲ ಪ್ರಾಥಮಿಕ ಹಂತದಿಂದ ಹಿಡಿದು ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗುವವರೆಗಿನ ಎಲ್ಲಾ ಹಂತಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳು ತಮ್ಮ ಪಾಲಿನ ಕಮಿಷನ್ ಮೊತ್ತ ಪಾವತಿಯಾಗದೇ ಟೆಂಡರ್‌ಗಳ ಅನುಮೋದನೆಯನ್ನೂ ನೀಡುವುದಿಲ್ಲ ಮತ್ತು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಕಡತಗಳಿಗೆ ಸಹಿಯನ್ನೂ ಹಾಕುವುದಿಲ್ಲ ಎಂದು ರಮೇಶ್‌ ಕಿಡಿಕಾರಿದರು.

ಡಾಂಬರೀಕರಣ ಕಾರ್ಯ ಮತ್ತು ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಕಳಪೆ ಗುಣಮಟ್ಟದ ಕಚ್ಛಾ ವಸ್ತುಗಳ ಬಳಕೆ ಮಾಡಲಾಗಿದೆ. ಪ್ರತಿ ವರ್ಷ ಕನಿಷ್ಠ ₹7-8 ಸಾವಿರ ಕೋಟಿಯನ್ನು ಪಾಲಿಕೆಯ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸುವ ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿ ಮಾಡುವ ಡಾಂಬರೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ, ಡಾಂಬರೀಕರಣಕ್ಕೆ ಬಳಸುವ ಕಚ್ಛಾ ವಸ್ತುಗಳ ಗುಣಮಟ್ಟದ ಪರಿಶೀಲನೆಗೆ ಒಂದೇ ಒಂದು ಪ್ರಯೋಗಾಲಯವನ್ನೂ ಹೊಂದಿಲ್ಲ. ನೆರೆಯ ಹೈದರಾಬಾದ್ ಅಥವಾ ಪುಣೆ ನಗರಗಳಲ್ಲಿರುವ ಪ್ರಯೋಗಾಲಯಗಳನ್ನೇ ಅವಲಂಬಿಸಬೇಕಾದ ದುಸ್ಥಿತಿ ಇದೆ ಎಂದರು.

ಮಾಧ್ಯಮಗಳಿಗೆ ಮಾತನಾಡುವಾಗ ರಮೇಶ್‌ರನ್ನು ವಶಕ್ಕೆ ಪಡೆದ ಖಾಕಿ: ಬಿಬಿಎಂಪಿ ಕೇಂದ್ರ ಕಚೇರಿಯ ಬಳಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ ಪ್ರಸಂಗ ನಡೆಯಿತು.

ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆಯಾದ ₹46,300 ಕೋಟಿ ಅನುದಾನ ದುರ್ಬಳಕೆ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ ಪಾಲಿಕೆ ಕಚೇರಿ ಆವರಣ ಬಳಿ ಸುದ್ದಿಗಾರರ ಜತೆ ರಮೇಶ್‌ ಮಾತನಾಡುತ್ತಿದ್ದರು. ಈ ವೇಳೆ ಹಲಸೂರು ಗೇಟ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ದಿಢೀರ್‌ ಆಗಿ ರಮೇಶ್‌ ಅವರನ್ನು ಕರೆದೊಯ್ದರು. ಪೊಲೀಸ್‌ ವಾಹನದಲ್ಲಿ ಕರೆದೊಯ್ದ ಪೊಲೀಸರು ಫ್ರೀಡಂಪಾರ್ಕ್‌ ಬಳಿ ಬಿಟ್ಟು ತೆರಳಿದರು.

ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಈ ರೀತಿ ಮಾಡಿಸಿದ್ದಾರೆ. ಈ ಬಗ್ಗೆ ಕಾನೂನು ರೀತಿ ಹೋರಾಟ ನಡೆಸಲಾಗುವುದು.ಎನ್‌.ಆರ್‌.ರಮೇಶ್‌, ಬಿಬಿಎಂಪಿ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ