ರಾಮನಗರ: ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯಲ್ಲಿ ನಕಲಿ ಚಿನ್ನ ಅಡವಿಡಿಸಿ 9 ಕೋಟಿಗೂ ಹೆಚ್ಚಿನ ಹಣ ದುರುಪಯೋಗವಾಗಿದೆ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಆಗ್ರಹಿಸಿದರು.
ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಹೋದರ ಆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ (ತಮ್ಮಾಜಿ) ಕೋಟ್ಯಂತರ ರು. ಹಗರಣದ ರುವಾರಿಯಾಗಿದ್ದಾರೆ. ನಕಲಿ ಚಿನ್ನ ಅಡವಿಡಿಸಿ ಅಶೋಕ್ ತಮ್ಮ ಬೆಂಬಲಿಗರಿಗೆ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಶಾಖೆ ಮ್ಯಾನೇಜರ್, ಅಪ್ರೈಸರ್ ಮಾತ್ರವಲ್ಲದೆ ಸಿಬ್ಬಂದಿಗಳೆಲ್ಲರು ಭಾಗಿಯಾಗಿದ್ದಾರೆ. ತಮ್ಮದೇ ಸರ್ಕಾರ ಆಡಳಿತದಲ್ಲಿದೆ ಎಂದು ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುದೂರು ಶಾಖೆಯಲ್ಲಿ ದುರುಪಯೋಗವಾಗಿರುವ 9 ಕೋಟಿ ರೈತರ ಬೆವರಿನ ಹಣ. ಕೃಷಿ ಚಟುವಟಿಕೆ ಮತ್ತು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ರೈತರು ಬ್ಯಾಂಕಿನಲ್ಲಿ ಸಾಲ ಪಡೆದು, ಅದಕ್ಕೆ ಬಡ್ಡಿ ಕಟ್ಟುತ್ತಾರೆ. ಈ ಮೂಲಕ ಸಹಕಾರ ಕ್ಷೇತ್ರ ಬೆಳೆಯಲಿ ಎಂಬುದು ರೈತರ ಉದ್ದೇಶ. ಅದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ದೂರಿದರು.ಶಾಖೆ ಮ್ಯಾನೇಜರ್ ವರ್ಗಾವಣೆ ವಿಚಾರದ ವೇಳೆ ಕೋಟ್ಯಂತರ ರುಪಾಯಿ ಹಣ ದುರುಪಯೋಗದ ವಿಚಾರ ಬಹಿರಂಗವಾಗಿದೆ. ಇದು ಎಷ್ಟು ವರ್ಷಗಳಿಂದ ನಡೆದು, ಎಷ್ಟು ಕೋಟಿ ರು.ದುರುಪಯೋಗವಾಗಿದೆ. ಇದರಲ್ಲಿ ಸ್ವಯಂ ಘೋಷಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಾಗಡಿ ಕ್ಷೇತ್ರದ ನಿರ್ದೇಶಕ ಅಶೋಕ್ ಪಾತ್ರ ಏನಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಿಲ್ಲ ಏಕೆ? ಶಾಖೆ ಮ್ಯಾನೇಜರ್ ಸೇರಿದಂತೆ ಸಿಬ್ಬಂದಿ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಲಿಲ್ಲ ಏಕೆಂದು ಪ್ರಶ್ನಿಸಿದರು.
ಬ್ಯಾಂಕಿನಲ್ಲಿ ಕುರಿ ಕೋಳಿ ಸಾಕಾಣಿಕೆ ನೆಪದಲ್ಲಿಯೂ ಹಣ ದುರುಪಯೋಗ ಆಗುತ್ತಿದೆ. ಆ ಹಣ ಮನ್ನಾ ಆದರೆ ನಿರ್ದೇಶಕರ ಜೇಬು ಪಾಲಾಗುತ್ತದೆ. ಯಾವ ರೈತ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾನೊ ಆತನ ಷೇರು ಇಲ್ಲದಂತೆ ಮಾಡುತ್ತಾರೆ. ಬ್ಯಾಂಕುಗಳಲ್ಲಿ ಪ್ರತಿದಿನ ರೈತರ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್, ಮುಖಂಡರಾದ ಶೇಷಪ್ಪ, ನರಸಿಂಹಯ್ಯ, ಇಟ್ಟುಮಡು ಗೋಪಾಲ್, ಖಲೀಲ್ ಇದ್ದರು.ಬಾಕ್ಸ್ .................
ರಾಮನಗರ: ಬಿಡಿಸಿಸಿ ಬ್ಯಾಂಕ್ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಹಾರೋಹಳ್ಳಿ ತಾಲೂಕು ಹಾಗೂ ಸೋಲೂರು ಹೋಬಳಿಯನ್ನು ಒಂದೊಂದು ಕ್ಷೇತ್ರವನ್ನಾಗಿ ಏಕೆ ರಚನೆ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನಿಸಿದರು.
ಸೊಸೈಟಿಗಳು ನಿರ್ದೇಶಕರ ಕೈಯಲ್ಲಿಯೇ ಇರಬೇಕು. ಸಾಲ ವಿತರಣೆ, ಮರುಪಾವತಿ ಎಲ್ಲವೂ ಬುಕ್ ಅಡ್ಜಸ್ಟ್ ಮೆಂಟ್ ನಲ್ಲಿ ನಡೆಯುತ್ತಿದೆ. ಕೆಸಿಸಿ ಲೋನ್ ನಲ್ಲಿ ಕಮಿಷನ್ ಸೇರಿದಂತೆ ಪ್ರತಿಯೊಬ್ಬ ನಿರ್ದೇಶಕ ವರ್ಷಕ್ಕೆ 5 ಕೋಟಿ ರುಪಾಯಿ ಕಮಿಷನ್ ಪಡೆಯುತ್ತಿದ್ದಾನೆ. ಹೀಗಾಗಿಯೇ ಒಂದೇ ಕುಟುಂಬದವರು ಸಹಕಾರ ಕ್ಷೇತ್ರಗಳಿಗೆ ಆಯ್ಕೆಯಾಗುತ್ತಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.