ಕೆ.ಹೊನ್ನಲಗೆರೆ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಪ್ರಕರಣ

KannadaprabhaNewsNetwork |  
Published : Jan 04, 2025, 12:30 AM IST
3ಕೆಎಂಎನ್ ಡಿ23 | Kannada Prabha

ಸಾರಾಂಶ

ಸಂಘದ ಮಾಜಿ ಸಿಇಒ ನಾಗರಾಜು ಭದ್ರತೆಗಾಗಿ ನೀಡಿದ್ದ ತಮ್ಮ ಜಮೀನನ್ನು ಮಾರಾಟ ಮಾಡಲು ಸಹಕಾರ ನೀಡಿದ್ದ ಲಕ್ಷ್ಮೀದೇವಿ ವಿರುದ್ಧ ಕ್ರಮಕೈಗೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ ತಹಸೀಲ್ದಾರ್ ಡಾ.ಸ್ಮಿತಾ ರಾಮು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿ ಅಮಾನತ್ತುಗೊಂಡಿರುವ ನಾಗರಾಜು ಅವರಿಗೆ ಸೇರಿದ ಜಮೀನು ಮಾರಾಟ ಮಾಡಲು ಲಕ್ಷ್ಮೀದೇವಿ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದ ಸಂಘದ ಜನಪ್ರತಿನಿಧಿಗಳೊಂದಿಗೆ ಶಾಸಕ ಕೆ.ಎಂ.ಉದಯ್ ದೂರುಗಳನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆ.ಹೊನ್ನಲಗೆರೆ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಪ್ರಕರಣದಲ್ಲಿ ಸಿಇಒ ನಾಗರಾಜ್ ಉದ್ಯೋಗ ಪಡೆಯುವಾಗ ಭದ್ರತೆಗಾಗಿ ನೀಡಿದ್ದ ಜಮೀನಿನ ದಾಖಲೆಗಳನ್ನು ರದ್ದುಪಡಿಸಿ ಮಾರಾಟ ಮಾಡಲು ಅನುಕೂಲ ಕಲ್ಪಿಸಿರುವ ತಹಸೀಲ್ದಾರ್ ಮತ್ತು ಭೂಮಿ ಶಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಸಂಘದ ಜನಪ್ರತಿನಿಧಿಗಳು, ಷೇರುದಾರರ ಬೆಂಬಲದೊಂದಿಗೆ ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಆರ್. ಬಿ.ಅಪ್ಪಾಜಿಗೌಡ ನೇತೃತ್ವದಲ್ಲಿ ಗ್ರಾಮದಿಂದ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು ಹಾಗೂ ನೂರಾರು ಷೇರುದಾರರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಧರಣಿ ನಡೆಸಿ, ಹಿಂದಿನ ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮೀ ನರಸಿಂಹ ಹಾಗೂ ಭೂಮಿ ಶಾಖೆ ಪ್ರಥಮ ದರ್ಜೆ ಸಹಾಯಕಿ ಲಕ್ಷ್ಮೀದೇವಿ ವಿರುದ್ಧ ಘೋಷಣೆ ಕೂಗಿದರು.

ಹಣ ದುರುಪಯೋಗದಿಂದ ಅಮಾನತ್ತಾಗಿದ್ದ ನಾಗರಾಜು ಭೀಮನಕೆರೆ ಗ್ರಾಮದ ಸರ್ವೇ ನಂ, 121/3 ರಲ್ಲಿರುವ 2 ಎಕರೆ 4.08 ಜಮೀನನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಕಾನೂನು ಬಾಹಿರವಾಗಿ ಕಂದಾಯ ಇಲಾಖೆ ಅಧಿಕಾರಿಗಳು ವ್ಯವಹಾರ ನಡೆಸಿ ಕರ್ತವ್ಯ ಲೋಪವ್ಯಸಗಿದ್ದಾರೆ. ಈ ಹಗರಣದ ಬಗ್ಗೆ ಸಹಕಾರ ಸಂಘದ ಉಪ ನಿಬಂಧಕರ ನ್ಯಾಯಾಲಯದಲ್ಲಿ ನಾಗರಾಜು ವಿರುದ್ಧ ಮೊಕದ್ದಮೆ ಹೂಡಿತ್ತು. ಅಂದಿನ ನಿಬಂಧಕರಾಗಿದ್ದ ಎಸ್.ಕೃಷ್ಣ ಶೆಟ್ಟಿ ಮಾಜಿ ಸಿಇಒ ನಾಗರಾಜ್ ಅವರ ಆಸ್ತಿ ಜಪ್ತಿ ಮಾಡುವಂತೆ ತೀರ್ಪು ನೀಡಿದ್ದರು.

ಮಧ್ಯೆ ನಾಗರಾಜು ಅವರ ಪ್ರಭಾವ ಮತ್ತು ಆಮಿಷಕ್ಕೆ ಒಳಗಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳು ನಾಗರಾಜು ಅವರ ಸದರಿ ಆಸ್ತಿಯನ್ನು ನಾಗಮಂಗಲ ತಾಲೂಕು ಬೆಳ್ಳೂರು ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಕಾನೂನು ಬಾಹಿರವಾಗಿ ಎಸ್.ಆರ್. ರಾಧಾ ಹೆಸರಿಗೆ ಶುದ್ಧ ಕ್ರಯ ಪತ್ರ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅಪ್ಪಾಜಿಗೌಡ ಆರೋಪಿಸಿದರು.

ಕರ್ತವ್ಯ ಲೋಪ ಮಾಡಿರುವ ತಹಸೀಲ್ದಾರ್ ಸೋಮಶೇಖರ್, ಭೂಮಿ ಶಾಖೆ ಶಿರಸ್ತೇದಾರ್ ಲಕ್ಷ್ಮೀನರಸಿಂಹ ಹಾಗೂ ಆಪರೇಟರ್ ಲಕ್ಷ್ಮೀದೇವಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸಣ್ಣಮ್ಮ, ನಿರ್ದೇಶಕರಾದ ಕೆಂಪೇಗೌಡ, ಕೃಷ್ಣೇಗೌಡ, ತಿಬ್ಬೇಗೌಡ, ಚನ್ನವೀರಯ್ಯ, ದೇವರಾಜು, ಮಾದಯ್ಯ, ಚೆನ್ನಮ್ಮ, ಪುಟ್ಟಮಾದು, ಮಲ್ಲಿಕಾರ್ಜುನ, ದರ್ಶನ್ ಕುಮಾರ್, ಮುಖಂಡರಾದ ಪುಟ್ಟಸ್ವಾಮಿ, ಹೊನ್ನಲಗೆರೆ ಸ್ವಾಮಿ, ಮುತ್ತರಾಜು, ಶಿವರಾಜು, ನಾಗೇಶ, ರಮೇಶ್, ರಾಜೇಗೌಡ ದೊಡ್ಡಿ ಬಸವಣ್ಣ ಮತ್ತಿತರರು ಭಾಗವಹಿಸಿದ್ದರು.

ಕ್ರಮ ಕೈಗೊಳ್ಳಲು ಪ್ರಸ್ತಾವನೆ:

ಸಂಘದ ಮಾಜಿ ಸಿಇಒ ನಾಗರಾಜು ಭದ್ರತೆಗಾಗಿ ನೀಡಿದ್ದ ತಮ್ಮ ಜಮೀನನ್ನು ಮಾರಾಟ ಮಾಡಲು ಸಹಕಾರ ನೀಡಿದ್ದ ಲಕ್ಷ್ಮೀದೇವಿ ವಿರುದ್ಧ ಕ್ರಮಕೈಗೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ ತಹಸೀಲ್ದಾರ್ ಡಾ.ಸ್ಮಿತಾ ರಾಮು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿ ಅಮಾನತ್ತುಗೊಂಡಿರುವ ನಾಗರಾಜು ಅವರಿಗೆ ಸೇರಿದ ಜಮೀನು ಮಾರಾಟ ಮಾಡಲು ಲಕ್ಷ್ಮೀದೇವಿ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದ ಸಂಘದ ಜನಪ್ರತಿನಿಧಿಗಳೊಂದಿಗೆ ಶಾಸಕ ಕೆ.ಎಂ.ಉದಯ್ ದೂರುಗಳನ್ನು ಆಲಿಸಿದರು.

ನಂತರ ತಹಸೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸ್ಮಿತಾ ರಾಮು ಲಕ್ಷ್ಮೀ ದೇವಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಸಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!