ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ವಸತಿ ಯೋಜನೆಗಳ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.
ಮುಂದಿನ ಸೋಮವಾರ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಪಂಚಾಯತ್ ರಾಜ್ ಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಈ ಎಲ್ಲಾ ಅಕ್ರಮಗಳ ತನಿಖೆಗೆ ಆದೇಶ ನೀಡುವವರೆಗೂ ನಿರಂತರವಾದ ಚಳವಳಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ತಾಲೂಕಿನ ಎಲ್ಲಾ ಭಾಗದ ರೈತರು ಸಂಘಟಿತರಾಗಿ ಹೋರಾಟಕ್ಕೆ ಬರಬೇಕು ಎಂದು ಮನವಿ ಮಾಡಿದರು.
ತಾಲೂಕು ತೀವ್ರ ಬರಗಾಲ ಪೀಡಿತವಾಗಿದ್ದು ಜೆಜೆ ಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಹೊಡೆದು ತೋಟಗಳನ್ನು ಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ರೈತರು ಸಂಘಟಿತರಾಗಿ ವಾಣಿವಿಲಾಸ ಜಲಾಶಯದ ನೀರು ತಾಲೂಕಿನ ಎಲ್ಲಾ ಭಾಗಕ್ಕೂ ಹರಿಸಲು ಹೋರಾಟ ಮಾಡಬೇಕಾಗಿದೆ. ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಂದ ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10 ಟಿಎಂಸಿ ನೀರು ಹರಿಸಲು ನಿರಂತರ ಚಳವಳಿ ಮಾಡಬೇಕು ಎಂದರು.ಹೊಸ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ನಿಗದಿ ಮಾಡಿರುವ 5300 ಕೋಟಿ ರು. ಹಣ ಬಿಡುಗಡೆ ಮಾಡಲು ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ಮಾಡಲು ಜಿಲ್ಲೆಯ ರೈತರು ಸಿದ್ದವಾಗಬೇಕು ಎಂದರು.
ಎಡ-ಬಲ ನಾಲೆಗೆ ನೀರು ಹರಿಸಲು ಒತ್ತಾಯ: ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿ ವಾಣಿವಿಲಾಸ ಜಲಾಶಯದಿಂದ ಶೀಘ್ರವಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ಕಳೆದ 50 ದಿನಗಳ ಹಿಂದೆ ನೀರು ಹರಿಸಿದ್ದು ಇದೀಗ ಬಿಸಿಲಿನ ತಾಪ ಹೆಚ್ಚಾಗಿದ್ದು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಎಡ ಮತ್ತು ಬಲನಾಲೆಗಳ ಮೂಲಕ ತುರ್ತಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.