ಕನ್ನಡಪ್ರಭ ವಾರ್ತೆ ಮಂಡ್ಯ
ಆರೋಪಿ ಪ್ರವೀಣ್‌ಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ೧೯೯೮ ಸಾರ್ವಜನಿಕ ಹಕ್ಕು ರಕ್ಷಣೆ ೧೯೭೬-೭೭, ಪಿಒಎ ಕಾಯಿದೆ-೧೯೮೯೯ ಮತ್ತು ಐಪಿಸಿ ಸೆಕ್ಷನ್ ೧೬೬ ಕೆಸಿಎಸ್‌ಆರ್ ನಿಯಮಗಳು ೧೯೬೬ ಮತ್ತು ಕೆಸಿಎಸ್‌ಆರ್ ಕಾಯಿದೆ ೧೯೭೮ನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವ ಗಂಭೀರ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಸೇವೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶರಣಬಸಪ್ಪ ಅವರು ಜಿಪಂ ಸಿಇಒಗೆ ಸೂಚಿಸಿದ್ದಾರೆ.
ಏನಾಗಿತ್ತು?ಡಾ.ಬಿ.ಬಿ. ಪ್ರವೀಣ್‌ಕುಮಾರ್ ಅವರು ಪಾಂಡವಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ೨೦೧೮-೧೯ನೇ ಸಾಲಿನ ಆರ್‌ಕೆವಿವೈ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸಿದ್ದ ೫೦೦ ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಫಲಾನುಭವಿಗಳನ್ನು ಆಯ್ಕೆ ಮಾಡದೆ, ಮಂಜೂರು ಮಾಡದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಣ ದುರುಪಯೋಗಪಡಿಸಿಕೊಂಡಿದ್ದರು.
ತನಿಖಾ ತಂಡ ಸಲ್ಲಿಸಿರುವ ವರದಿಯಲ್ಲಿ ಡಾ.ಬಿ.ಬಿ. ಪ್ರವೀಣ್‌ಕುಮಾರ್ ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳದ ಕ್ರಿಯಾ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಲ್ಲದೇ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ ಸಾಲ ಮಂಜೂರು ಮಾಡುವ ಹಾಗೂ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯನ್ನೂ ಪಡೆಯದೆ ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾಗಿರುವ ಸಹಾಯ ಧನದ ಮೊತ್ತವನ್ನು ಏಕ ಪಕ್ಷೀಯವಾಗಿ ಧನಾದೇಶದ ಮೂಲಕ ಬ್ಯಾಂಕ್‌ಗೆ ಬಿಡುಗಡೆ ಮಾಡಿರುವುದು ಕಂಡುಬಂದಿದೆ.
ಮಂಡ್ಯ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ೨೦.೩.೨೦೨೩ರಲ್ಲಿ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳ ಮನೆಗೆ ಖುದ್ದು ತೆರಳಿ ಪರಿಶೀಲನೆ ನಡೆಸಿದಾಗ ಕೋಳಿ ಘಟಕ ಸ್ಥಾಪನೆ ಮಾಡಲು ಸರ್ಕಾರದಿಂದ ಯಾವುದೇ ಹಣ ಬಂದಿಲ್ಲದಿರುವುದು, ಘಟಕಗಳನ್ನು ಸ್ಥಾಪನೆ ಮಾಡಿಲ್ಲವೆಂದು ಮೌಖಿಕವಾಗಿ ತಿಳಿದುಬಂದಿದೆ.
----------
ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ನೀಡಿದ ದೂರಿನನ್ವಯ ೨೦೧೮-೧೯ನೇ ಸಾಲಿನಲ್ಲಿ ನೀಡಿರುವ ಅನುದಾನವನ್ನು ದುರುಪಯೋಗ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ೧೧.೧೦. ೨೦೨೩ರಂದು ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ನೋಡಲ್ ಏಜೆನ್ಸಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ ಮದ್ದೂರು ಪಶು ವೈದ್ಯಾಧಿಕಾರಿ ಡಾ.ಬಿ.ಬಿ. ಪ್ರವೀಣ್‌ಕುಮಾರ್ ವಿರುದ್ಧ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಲಂ ೨೪ರಂತೆ ಕ್ರಿಮಿನಲ್ ಮೊಕದ್ದಮೆ (ಎಫ್‌ಐಆರ್) ಮತ್ತು ಐಪಿಸಿ ಸೆಕ್ಷನ್ಗ್‌ಳನ್ನು ಸೇರಿಸಿ ೨೪ ಗಂಟೆಯೊಳಗೆ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.