ಪಿಎಫ್ ಮತ್ತು ಇಎಸ್ ಐ ಹಣ ಪಾವತಿ ಮಾಡದೆ ದುರುಪಯೋಗ: ಕಾರ್ಮಿಕರ ಆರೋಪ

KannadaprabhaNewsNetwork |  
Published : Aug 30, 2024, 01:05 AM IST
29ಕೆಎಂಎನ್ ಡಿ16 | Kannada Prabha

ಸಾರಾಂಶ

ಕಾರ್ಮಿಕರ ಗಮನಕ್ಕೆ ತಾರದೆ ಕಳೆದ ತಿಂಗಳಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯನ್ನು ಏಕಾಏಕಿ ಮುಚ್ಚಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಾರ್ಮಿಕ ಕಾಯ್ದೆ ಉಲ್ಲಂಘನೆಯಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸರವಿ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ಪಿಎಫ್ ಮತ್ತು ಇಎಸ್‌ಐ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಿದೆ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿ ಕಾರ್ಖಾನೆ ರಾಮನಗರ ಶಾಖೆ ಕಾರ್ಮಿಕರು ಕೃಷಿ ಕೂಲಿಕಾರರ ಸಂಘದ ಬೆಂಬಲದೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆಗಿಳಿದ ಮಹಿಳೆಯರು ಸೇರಿದಂತೆ ನೂರಾರು ಕಾರ್ಮಿಕರು ಸರವಿ ಕಾರ್ಖಾನೆ ಆಡಳಿತ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಕಾರ್ಖಾನೆಗೆ ಮುತ್ತಿಗೆ ಹಾಕಿದರೆ ಹಾಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವುದನ್ನು ಅರಿತು ಕಾರ್ಖಾನೆ ಮಾನವ ಸಂಪನ್ಮೂಲ ವ್ಯವಸ್ಥಾಪಕ ಪ್ರದೀಪ್ ಹಾಗೂ ಲೆಕ್ಕಾಧಿಕಾರಿ ಪ್ರತಾಪ್ ಅವರುಗಳು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಮುಂದಾದರು.

ಈ ವೇಳೆ ಕಾರ್ಮಿಕರು ತಮ್ಮ ವೇತನದಲ್ಲಿ ಕಡಿತ ಮಾಡಿರುವ ಪಿಎಫ್ ಮತ್ತು ಇಎಸ್‌ಐ ಹಣವನ್ನು ಸರ್ಕಾರದ ಸಂಬಂಧಿಸಿದ ಇಲಾಖೆಗೆ ಪಾವತಿ ಮಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸರವಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ರಾಮನಗರ ಶಾಖೆಯ ನೂರಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಆಡಳಿತ ಮಂಡಳಿ ಪಿಎಫ್ ಮತ್ತು ಇಎಸ್‌ಐ ಹಣ ಪಾವತಿ ಮಾಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.

ಕಾರ್ಮಿಕರ ಗಮನಕ್ಕೆ ತಾರದೆ ಕಳೆದ ತಿಂಗಳಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯನ್ನು ಏಕಾಏಕಿ ಮುಚ್ಚಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಾರ್ಮಿಕ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಾರ್ಖಾನೆ ಎಚ್.ಆರ್.ಮಾನೇಜರ್ ಪ್ರದೀಪ್ ಮಾತನಾಡಿ, ಕಾರ್ಖಾನೆ ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣ ಸಕಾಲದಲ್ಲಿ ಕಾರ್ಮಿಕರಿಗೆ ಇಎಸ್ಐ ಮತ್ತು ಪಿಎಫ್ ಹಣ ಪಾವತಿ ವಿಳಂಬವಾಗಿದೆ. ಹೀಗಾಗಿ ಪ್ರತಿ 15 ದಿನಕ್ಕೊಮ್ಮೆ ಸರದಿ ಪ್ರಕಾರ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ, ಉಪಾಧ್ಯಕ್ಷ ಸುರೇಂದ್ರ, ಅರುಣ್ ಕುಮಾರ್, ಕಾರ್ಮಿಕ ಮುಖಂಡರಾದ ಎಂ.ವಿ.ಚೈತ್ರ, ಬಿ.ಎಸ್.ಅನಿತಾ. ರೂಪ, ಬಸವರಾಜು, ಅನಿಲ್ ಕುಮಾರ್, ರಾಮಕೃಷ್ಣ, ಮಹದೇವಯ್ಯ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್
ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ