ಬಸವರಾಜ ಹಿರೇಮಠ

ಧಾರವಾಡ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಎದುರಿಸುತ್ತಿರುವ ಹಲವು ಸವಾಲುಗಳ ಮಧ್ಯೆ, ಆಡಳಿತವನ್ನು ಸುವ್ಯವಸ್ಥಿತಗೊಳಿಸಲು ಮತ್ತು ಶೈಕ್ಷಣಿಕ ಶಿಸ್ತನ್ನು ಪುನಃಸ್ಥಾಪಿಸಲು ವಿಶ್ವವಿದ್ಯಾಲಯ ಇದೀಗ ಕಸರತ್ತು ನಡೆಸಿದೆ.

ನಿವೃತ್ತಿ ಹೊಂದಿದ ಸಿಬ್ಬಂದಿಗೆ ನೀಡಲು ಪಿಂಚಣಿ ಅನುದಾನ ಕೊರತೆ, ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆ ಸೇರಿದಂತೆ ರಾಜ್ಯ ಸರ್ಕಾರದ ಆರ್ಥಿಕ ಬಲ ಇಲ್ಲದೇ ವಿಶ್ವವಿದ್ಯಾಲಯ ಹಲವು ವರ್ಷಗಳಿಂದ ಆಂತರಿಕ ಸಂಪನ್ಮೂಲದಿಂದ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದೆ. ಹಾಗೆಯೇ, ಕೋವಿಡ್‌ ನಂತರ ತೀವ್ರ ಆರ್ಥಿಕ ಬಿಕಟ್ಟು ಹಾಗೂ ನಿಯಮಿತವಾಗಿ ಪರೀಕ್ಷೆ ನಡೆಸಲಾಗದೇ ವಿವಿ ಸಮಸ್ಯೆ ಅನುಭವಿಸಿತ್ತು. ಇದೀಗ ನೂತನ ಕುಲಪತಿ ಡಾ. ಎ.ಎಂ. ಖಾನ್‌ ಅವರು ವಿವಿಯನ್ನು ಹೊಸ ದಿಕ್ಕಿಗೆ ಒಯ್ಯಲು ಹಲವು ಯೋಜನೆ ರೂಪಿಸಿದ್ದು, ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಶೈಕ್ಷಣಿಕ ಕ್ಯಾಲೆಂಡರ್‌ ಪಾಲನೆ:


ವಿಳಂಬಿತ ಪರೀಕ್ಷೆ ಮತ್ತು ಫಲಿತಾಂಶಗಳು ತಡವಾಗಿ ಘೋಷಣೆಯಾಗುತ್ತಿದ್ದು, ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಫಲಿತಾಂಶ ಪಡೆಯುವಲ್ಲಿ ಮೂರರಿಂದ ನಾಲ್ಕು ತಿಂಗಳ ವಿಳಂಬದಿಂದಾಗಿ, ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅಥವಾ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾನಿಲಯವು ಪ್ರತಿ ವರ್ಷ ಕಾರ್ಯಕ್ರಮಗಳ ಕ್ಯಾಲೆಂಡರ್ ಪ್ರಕಟಿಸಿದರೂ, ವಿವಿಧ ಕಾರಣಗಳಿಂದ ಪಾಲನೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವಿವಿ ಶೈಕ್ಷಣಿಕ ಕ್ಯಾಲೆಂಡರ್ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಮೇ ತಿಂಗಳ ಮೊದಲು ಪರೀಕ್ಷೆ ನಡೆಸಲಾಗುವುದು ಮತ್ತು ಫಲಿತಾಂಶವನ್ನು ತ್ವರಿತವಾಗಿ ಘೋಷಿಸಲಾಗುತ್ತದೆ. ಇದನ್ನು ಸಾಧಿಸಲು ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಷ್ಕರಿಸಲಾಗುವುದು. ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಕೆಯಿಂದ ಹಿಡಿದು ಹಾಲ್ ಟಿಕೆಟ್‌ ಮತ್ತು ಫಲಿತಾಂಶ ಪ್ರಕಟಣೆಗಳ ವರೆಗೆ ಎಲ್ಲವನ್ನೂ ನಿರ್ವಹಿಸಲು ಕೇಂದ್ರೀಕೃತ ವ್ಯವಸ್ಥೆ ಪರಿಚಯಿಸಲಾಗುವುದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವ ಅಗತ್ಯ ಇಲ್ಲದಂತೆ ನಿರ್ವಹಿಸಲಾಗುತ್ತದೆ.

ಪೀಠಗಳಿಗೆ ಬಲ:

ಕ್ರೀಡಾ ಮೂಲಸೌಕರ್ಯ ಸುಧಾರಿಸುವುದು ವಿವಿ ಮತ್ತೊಂದು ಆದ್ಯತೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಅಡಿಯಲ್ಲಿ ಬ್ಯಾಡ್ಮಿಂಟನ್ ಮತ್ತು ಟೆನಿಸ್ ಕೋರ್ಟ್‌ ಹಾಗೂ ಈಜುಕೊಳ ನವೀಕರಿಸಲು ಯೋಜಿಸಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಅವರಿಗೆ ಸುಧಾರಿತ ತರಬೇತಿ ಒದಗಿಸಲು ಆಯ್ಕೆ ಪ್ರಯೋಗಗಳನ್ನು ಸಹ ನಡೆಸಲಾಗುವುದು. ಸಮಾಜ ಸುಧಾರಕರ ಹೆಸರಿನ ಸಂಶೋಧನಾ ಪೀಠಗಳು ಪ್ರಸ್ತುತ ಹಣ ಮತ್ತು ಸಿಬ್ಬಂದಿ ಕೊರತೆ ಎದುರಿಸುತ್ತಿವೆ ಮತ್ತು ಅವುಗಳ ಚಟುವಟಿಕೆಗಳು ಹೆಚ್ಚಾಗಿ ಕ್ಯಾಂಪಸ್‌ಗೆ ಸೀಮಿತವಾಗಿವೆ. ಇದನ್ನು ಪರಿಹರಿಸಲು, ವಿವಿ ಸಲಹಾ ಮಂಡಳಿ ರಚಿಸಲು ಮತ್ತು ಈ ಪೀಠಗಳನ್ನು ಬಲಪಡಿಸಲು ಮತ್ತು ಅವುಗಳ ಚಟುವಟಿಕೆಗಳನ್ನು ಇತರ ಜಿಲ್ಲೆಗಳಿಗೆ ವಿಸ್ತರಿಸಲು ಬೃಹತ್ ಹಣ ಪಡೆಯಲು ಯೋಜಿಸಿದೆ ಎಂದು ಕುಲಪತಿ ಡಾ.ಎ.ಎಂ. ಖಾನ್ ಮಾಹಿತಿ ನೀಡಿದರು.

ಗಾಂಧಿ ಭವನಕ್ಕೆ ನವೀಕರಣ ಭಾಗ್ಯ:

ಕೃತಕ ಬುದ್ಧಿಮತ್ತೆ ಹೆಚ್ಚುತ್ತಿರುವ ಬೇಡಿಕೆ ಗಮನದಲ್ಲಿಟ್ಟು ಎಲ್ಲ ಕೋರ್ಸ್‌ಗಳಲ್ಲಿ ಎಐ ಘಟಕ ಪರಿಚಯಿಸಲು ನಿರ್ಧರಿಸಿದೆ. ಏಳು ದಶಕಗಳ ಹಿಂದೆ ಸ್ಥಾಪಿಸಲಾದ ಅಸ್ತಿತ್ವದಲ್ಲಿರುವ ಗಾಂಧಿ ಭವನವನ್ನು ಸಹ ಆಧುನೀಕರಿಸಲಾಗುವುದು. ಹೈಬ್ರಿಡ್ ಮೋಡ್‌ನಲ್ಲಿ ಘಟಿಕೋತ್ಸವ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಪ್ರಮುಖ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಪ್ರತಿಭೆ ಪ್ರದರ್ಶಿಸಲು ಪ್ರೋತ್ಸಾಹಿಸಲು ಕ್ಯಾಂಪಸ್‌ನಲ್ಲಿ ತೆರೆದ ವೇದಿಕೆಯನ್ನು ಸಹ ರಚಿಸಲಾಗುವುದು ಎಂದರು. ಪ್ರಗತಿಯಲ್ಲಿದೆ ಸರ್ವೇ ಕಾರ್ಯ..

ಕರ್ನಾಟಕ ವಿಶ್ವವಿದ್ಯಾಲಯದ ಗತವೈಭವ ಮತ್ತೆ ಮರುಕಳಿಸಲು ಹಲವು ಯೋಜನೆ ಹಾಕಿಕೊಂಡಿದ್ದು, ಶೀಘ್ರ ಕಾರ್ಯಗತಗೊಳಿಸಲಾಗುವುದು. ಈ ಪೈಕಿ ವಿವಿ ಭೂಮಿ ಅತಿಕ್ರಮಣದ ದೂರಿದ್ದು, ವಿವಿಯ ತನ್ನ 888 ಎಕರೆ ಆವರಣವನ್ನು ಸಮೀಕ್ಷೆ ಮಾಡಲಾಗುತ್ತಿದೆ. ವಿವಿ ಭೂಮಿಯನ್ನು ನಕ್ಷೆ ಮಾಡಲು ಮತ್ತು ಅತಿಕ್ರಮಣದಾರರಿಂದ ಅದನ್ನು ಸುರಕ್ಷಿತವಾಗಿರಿಸಲು ನಿವೃತ್ತ ಸರ್ವೇ ಅಧಿಕಾರಿಯನ್ನು ನೇಮಿಸಿದ್ದು, ಪ್ರಗತಿಯಲ್ಲಿದೆ.

ಡಾ. ಎ.ಎಂ. ಖಾನ್‌, ಕವಿವಿ ಕುಲಪತಿ