- ಬ್ಯಾರಿಕೇಡ್ ಹತ್ತಿ ಡಿಸಿ ಕಚೇರಿಯತ್ತ ತೆರಳಲು ಯತ್ನ । ಪ್ರತಿಭಟನಾಕಾರರನ್ನು ಬಂಧನ , ಬಿಡುಗಡೆ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಕರೆಯ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಹೊರಟು ಆಜಾದ್ ಪಾರ್ಕ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದಂತೆ ಲೋಕೋಪಯೋಗಿ ಕಚೇರಿ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಅಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಬ್ಯಾರಿಕೇಡ್ ಹತ್ತಿ ಮುಂದಕ್ಕೆ ಹೋಗಲು ಯತ್ನಿಸಿದರು. ಈ ನೂಕಾಟ ತಳ್ಳಾಟದಲ್ಲಿ ಕೆಲವು ಮಂದಿ ಪೊಲೀಸರು ಮಳೆ ಕೆಸರು ನೀರಿಗೆ ಬಿದ್ದರು. ಕೆಲವರಿಗೆ ಕೈ ಉಗುರು ತಾಕಿ ರಕ್ತ ಬಂದಿತು. ಸಿಬ್ಬಂದಿಯೋರ್ವರ ಬ್ಯಾಡ್ಜ್ ಕಿತ್ತು ಹೋಯಿತು. ಇಷ್ಟೆಲ್ಲಾ ಆವಾಂತರ ನಡುವೆಯೇ ಪೊಲೀಸರು ಪ್ರತಿಭಟನಾ ಕಾರರನ್ನು ಬಂಧಿಸಿದರು. ಕೆಲ ಸಮಯದ ನಂತರ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ, ಎಸ್.ಟಿ. ಸಮುದಾಯಕ್ಕೆ ಮೀಸಲಿರಿಸಿದ್ಧ ಸುಮಾರು ₹ 187 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡು ವಿವಿಧ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಬಳಸಿ ಕೊಂಡಿರುವುದು ನಾಚಿಗೇಡಿನ ಸಂಗತಿ. ಈ ಹಣ ವರ್ಗಾವಣೆಯಲ್ಲಿ ನೈತಿಕ ಹೊಣೆ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದರು.
ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಮಾತನಾಡಿ, ಅನ್ಯಾಯಕ್ಕೆ ಒಳಗಾದವರಿಗೆ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರದಲ್ಲಿ ಸಣ್ಣ ವಸ್ತುಗಳನ್ನು ಖರೀದಿಸುವ ಅಥವಾ ಅನುದಾನ ಬಿಡುಗಡೆಗೊಳಿಸುವ ವೇಳೆ ಬಹಳಷ್ಟು ನಿಯಮ ರೂಪಿಸಿ ಹಣ ನೀಡುತ್ತದೆ. ಆದರೆ ಹಸ್ತಕ್ಷೇಪವಿಲ್ಲದೇ ದೊಡ್ಡ ಮಟ್ಟದಲ್ಲಿ ಆರ್ಥಿಕ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಹಣಕಾಸು ಇಲಾಖೆಯಡಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಸ್ಪಷ್ಟವಿದೆ. ಹೀಗಾಗಿ ನೈತಿಕ ಹೊಣೆ ಹೊತ್ತ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ವರ್ಗಾವಣೆಗೊಂಡ ಹಣ ವಾಪಸ್ ತಂದು ಎಸ್.ಟಿ. ಸಮುದಾಯಕ್ಕೆ ಬಳಕೆಗೆ ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.
ಪೋಟೋ ಫೈಲ್ ನೇಮ್ 28 ಕೆಸಿಕೆಎಂ 4ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.