ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅವ್ಯವಹಾರ, ಮೇಯರ್‌ಗೆ ತನಿಖಾ ವರದಿ ಸಲ್ಲಿಕೆ!

KannadaprabhaNewsNetwork |  
Published : Nov 08, 2025, 02:00 AM IST
ಮದಮದಮ | Kannada Prabha

ಸಾರಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಧೀನದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್ ಹೆಲ್ತ್ ಕೇರ್ ಎಂಬ ಯೋಜನೆಯನ್ನು 2019ರಲ್ಲೇ ಜಾರಿಗೊಳಿಸಿತ್ತು. ಆಸ್ಪತ್ರೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಜಾರಿಗೊಳಿಸುವ ವ್ಯವಸ್ಥೆ ಇದಾಗಿತ್ತು.

ಧಾರವಾಡ:

ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಜಾರಿಗೊಳಿಸಿದ್ದ ಸ್ಮಾರ್ಟ್‌ಹೆಲ್ತ್‌ ಕೇರ್‌ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಹಾನಗರ ಪಾಲಿಕೆ ರಚಿಸಿದ್ದ ಸದನ ಸಮಿತಿ ಬರೋಬ್ಬರಿ 11 ತಿಂಗಳ ಬಳಿಕ ಕೊನೆಗೂ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಅವ್ಯವಹಾರ ಆಗಿದೆ ಎಂಬುದು ಬೆಳಕಿಗೆ ಬಂದಿದ್ದು ಸ್ಮಾರ್ಟ್‌ಸಿಟಿ ಹೆಲ್ತ್ ಕೇರ್ ಸಿಬ್ಬಂದಿಗೆ ನೀಡಿದ್ದ ₹ 70 ಲಕ್ಷ ವಸೂಲಿ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಏನಾಗಿತ್ತು?

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಧೀನದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್ ಹೆಲ್ತ್ ಕೇರ್ ಎಂಬ ಯೋಜನೆಯನ್ನು 2019ರಲ್ಲೇ ಜಾರಿಗೊಳಿಸಿತ್ತು. ಆಸ್ಪತ್ರೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಜಾರಿಗೊಳಿಸುವ ವ್ಯವಸ್ಥೆ ಇದಾಗಿತ್ತು. ಆದರೆ, ಇದು ಬರೀ ಕಾಗದದಲ್ಲೇ ಮಾತ್ರ ಉಳಿದಿತ್ತು. ಈ ಮಷಿನ್ ಖರೀದಿ, ನಿರ್ವಹಣೆಗೆ ಪಾಲಿಕೆಯಿಂದ ₹ 3.26 ಕೋಟಿ ವೆಚ್ಚವಾಗಿದೆ. ಅಸಲಿಗೆ ಈ ಮಷಿನ್ ಅಳವಡಿಕೆಯಾದ ಬಳಿಕ ಒಂದೇ ಒಂದು ದಿನವೂ ಕಾರ್ಯನಿರ್ವಹಿಸಿರಲಿಲ್ಲ.

ಮೇಯರ್‌ಗೆ ವರದಿ:

ಇಲ್ಲಿನ ಅವ್ಯವಹಾರದ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿತ್ತು. ಹೀಗಾಗಿ ರಾಮಪ್ಪ ಬಡಿಗೇರ ಮೇಯರ್‌ ಆಗಿದ್ದ ವೇಳೆ (2025ರ ಜನವರಿ) ಪಾಲಿಕೆ ಸದಸ್ಯ ವೀರಣ್ಣ ಸವಡಿ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ ಹಾಗೂ ಕಾಂಗ್ರೆಸ್‌ನ ರಾಜು ಕಮತಿ, ಮಯೂರ ಮೋರೆ ಸಮಿತಿಯಲ್ಲಿದ್ದರು. ಈ ಬಗ್ಗೆ ಎರಡ್ಮೂರು ಬಾರಿ ಸಭೆ ನಡೆಸಿದ್ದ ಸಮಿತಿ, ಒಂದೆರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿತ್ತು. ಅಧಿಕಾರಿ ವರ್ಗದಿಂದ ಮಾಹಿತಿಯನ್ನೂ ಕೇಳಿತ್ತು. ಆದರೆ, ಅಧಿಕಾರಿ ವರ್ಗ ಸರಿಯಾದ ಮಾಹಿತಿಯನ್ನೇ ನೀಡಿರಲಿಲ್ಲ. ಇದೆಲ್ಲವನ್ನೂ ಉಲ್ಲೇಖಿಸಿ, ಅವ್ಯವಹಾರ ಆಗಿರುವುದು ಖಚಿತವಾಗಿರುವುದನ್ನು ಸ್ಪಷ್ಟಪಡಿಸಿ ಮೇಯರ್‌ ಜ್ಯೋತಿ ಪಾಟೀಲ ಅವರಿಗೆ ಶುಕ್ರವಾರ ಧಾರವಾಡದಲ್ಲಿನ ಪಾಲಿಕೆ ಕಚೇರಿಯಲ್ಲಿ ವರದಿಯನ್ನು ಸಲ್ಲಿಸಿದೆ.

ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಯು ಸಮರ್ಪಕವಾಗಿಲ್ಲ ಎಂಬ ವಿಚಾರ ವರದಿಯಲ್ಲಿದೆ. ಅಷ್ಟೇಯಲ್ಲ, ಪಾಲಿಕೆ ಅಧಿಕಾರಿಗಳು ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳ ನಡುವೆ ಯಾವುದೇ ಸಮನ್ವಯ ಇರಲಿಲ್ಲ. ಈ ಸಮಿತಿಯು ಕೇಳಿದ ಯೋಜನೆಯ ಸಮಗ್ರ ಮಾಹಿತಿಯನ್ನು ನೀಡಬೇಕಾಗಿತ್ತು. ಆದರೆ, ಅಭಿಯಂತರರಾದ‌ ವಿಜಯಕುಮಾರ, ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀಧರ ದಂಡೆಪ್ಪನವರ, ಸ್ಮಾರ್ಟ್‌ಸಿಟಿ ಅಧಿಕಾರಿ ಬಸವರಾಜ ಈ ಸಮಿತಿಗೆ ಒದಗಿಸಿದ ಮಾಹಿತಿ ಅಸಮರ್ಪಕವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

₹ 70 ಲಕ್ಷ ವಸೂಲಿ ಮಾಡಿ:

ಟೆಂಡರ್‌ ಹಾಗೂ ಇನ್ನಿತರ ಸಮಗ್ರ ಮಾಹಿತಿಯನ್ನು ಸಮಿತಿಗೆ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿಲ್ಲ ಎಂಬುದನ್ನು ತಿಳಿಸಿರುವ ಸಮಿತಿಯು, ಸ್ಮಾರ್ಟ್‌ಸಿಟಿ ಹೆಲ್ತ್ ಕೇರ್ ಸಿಬ್ಬಂದಿಗೆ ಪಾವತಿಸಿರುವ ₹ 70 ಲಕ್ಷ ವಸೂಲಾತಿಗೆ ಶಿಫಾರಸು ಮಾಡಿದೆ.ಹಣ ವ್ಯರ್ಥವಾಗಿರುವುದು ಸಾಬೀತು

ಯೋಜನೆಗೆ ವ್ಯಯಿಸಿದ ಹಣ ವ್ಯರ್ಥವಾಗಿರುವುದು ಸಾಬೀತಾಗಿದೆ. ಯೋಜನೆಯಿಂದ ಅನವಶ್ಯಕ ನಿರ್ವಹಣೆ ವೆಚ್ಚ ಮಾಡಿದ್ದು, ಪಾಲಿಕೆಗೆ ಆರ್ಥಿಕ ಹೊರೆಯಾದಂತಾಗಿದೆ. ಗುತ್ತಿಗೆ ಕರಾರುಗಳ ಉಲ್ಲಂಘನೆಯೂ ಆಗಿದೆ. ನಿಯಮ ಬಾಹಿರವಾಗಿ ಪಾಲಿಕೆಯಿಂದ ಗುತ್ತಿಗೆದಾರ ಹಣ ಪಡೆದಿದ್ದಾನೆ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ. ಸ್ಮಾರ್ಟ್ ಹೆಲ್ತ್ ಕೇರ್ ಯೋಜನೆ ಅಡಿಯಲ್ಲಿ ಆಗಬೇಕಾಗಿದ್ದ ಅತ್ಯುತ್ತಮವಾದ ಕೆಲಸಗಳು ಆಗಲೇ ಇಲ್ಲ. ಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಮಾಡಿದ ಯೋಜನೆಯು ಯಶಸ್ವಿಯಾಗಿ ಜಾರಿಯಾಗಿಲ್ಲ. ಅಂದುಕೊಂಡ ಉದ್ದೇಶವೇ ಈಡೇರಿಲ್ಲ ಎಂದು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

ಗಮನ ಸೆಳೆದಿದ್ದ ಕನ್ನಡಪ್ರಭ

ಸ್ಮಾರ್ಟ್‌ಹೆಲ್ತ್‌ ಕೇರ್‌ ಯೋಜನೆಯಲ್ಲಿ ಆಗಿದ್ದ ಅವ್ಯವಹಾರವನ್ನು ಕನ್ನಡಪ್ರಭ ಪತ್ರಿಕೆ ಸದನ ಸಮಿತಿ ರಚನೆಯಾಗುವ ಮುನ್ನವೇ ಪ್ರಕಟಿಸಿತ್ತು. ಅಲ್ಲದೇ, ಸಮಿತಿ ರಚನೆಯಾದ ಬಳಿಕ ಅಧಿಕಾರಿ ವರ್ಗ ಸಮಿತಿಗೆ ಮಾಹಿತಿ ನೀಡದಿರುವ ಬಗ್ಗೆಯೂ ಪ್ರಸ್ತಾಪಿಸಿ, ವರದಿ ನೀಡಲು ಸದನ ಸಮಿತಿ ಅನುಸರಿಸುತ್ತಿರುವ ವಿಳಂಬ ಬಗ್ಗೆ ಹಗರಣಕ್ಕೆ ಎಳ್ಳುನೀರು ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಡಿಜಿಟಲೀಕರಣ ಎಂದರೇನು?

ಚಿಟಗುಪ್ಪಿ ಆಸ್ಪತ್ರೆಗೆ ಬರುವ ರೋಗಿ ಮೊದಲು ಡಿಜಿಟಲ್ ನೋಂದಣಿ ಮಾಡಿಸಬೇಕು. ಅದು ಸಂಬಂಧಿತ ವೈದ್ಯರಿಗೆ ಡಿಜಿಟಲ್ ಮೂಲಕ ರವಾನೆಯಾಗಬೇಕು. ವೈದ್ಯರು ರೋಗಿ ತಪಾಸಣೆ ಮಾಡಿದ ಬಳಿಕ ಔಷಧಿ, ವಿವಿಧ ತಪಾಸಣೆಯನ್ನು ಕಂಪ್ಯೂಟರ್ ಮೂಲಕವೇ ಸೂಚಿಸಬೇಕಾಗುತ್ತದೆ. ಔಷಧಿಯೂ ನೋಂದಣಿ ಪತ್ರದ ಮೇಲಿರುವಂಥ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣವೇ ವೆಂಡಿಂಗ್ ಮಷಿನ್ ಮೂಲಕ ಪಡೆಯಬಹುದಾಗಿದೆ. ಒಂದು ಸಲ ಒಬ್ಬ ರೋಗಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆದ ಮೇಲೆ ಆತನ ಸಮಗ್ರ ಮಾಹಿತಿ ಈ ವ್ಯವಸ್ಥೆಯಲ್ಲಿ ಸದಾಕಾಲ ಇರುತ್ತದೆ. ಆತ ಮತ್ತೊಮ್ಮೆ ಆಸ್ಪತ್ರೆಗೆ ಬಂದರೆ ನೋಂದಣಿ ಮಾಡಿಸುವ ಅಗತ್ಯ ಬೀಳುವುದಿಲ್ಲ. ಆತನ ನೋಂದಣಿ ಸಂಖ್ಯೆ ಹೇಳಿದರೆ ಕಂಪ್ಯೂಟರ್ ಸ್ಕ್ರೀನ್ ಮೇಲೆ ಸಮಗ್ರ ಮಾಹಿತಿ ಥಟ್ಟನೇ ಬರುತ್ತದೆ. ರೋಗಿಗೆ ಬೇರೆ ಊರಲ್ಲಿರುವ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಿದ್ದರೂ ಅದನ್ನು ಕೂಡ ವರ್ಚುವಲ್ ಆಗಿ ಪಡೆದುಕೊಳ್ಳಬಹುದಾಗಿತ್ತು. ಹೀಗೆ ಪ್ರತಿಯೊಂದು ಅತ್ಯಾಧುನಿಕ ಸೌಲಭ್ಯಗಳು ಇಲ್ಲಿ ಲಭ್ಯವಾಗುತ್ತವೆ ಎಂದು ಹೇಳಲಾಗಿತ್ತು. ಒಪಿಡಿ, ಐಪಿಡಿ ಎಲ್ಲ ರೋಗಿಗಳ ಸಮಗ್ರ ಮಾಹಿತಿ ಇಲ್ಲಿರಬೇಕು. ಇದ್ಯಾವುದು ಈಗ ಅಲ್ಲಿ ಆಗುತ್ತಿರಲಿಲ್ಲ.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!