ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಕದಬಹಳ್ಳಿಯ ಎಪಿಎಂಸಿ ಆವರಣದಲ್ಲಿನ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆಸಿರುವ ಅಧಿಕಾರಿಗಳನ್ನು ಅಮಾನತು ಪಡಿಸಿ ರೈತರ ಕೊಬ್ಬರಿ ಖರೀದಿಗೆ ಮರು ನೋಂದಣಿ ಮಾಡಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಮರಿಯಪ್ಪ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ನಂತರ ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಅವ್ಯವಹಾರ ಮತ್ತು ಅಧಿಕಾರಿಗಳ ಧೋರಣೆ ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಕೆಲಕಾಲ ಧರಣಿ ನಡೆಸಿದರು.
ರೈತ ಸಂಘದ ಅಧ್ಯಕ್ಷ ಎಲ್.ಸುರೇಶ್ ಮಾತನಾಡಿ, ಕದಬಹಳ್ಳಿ ಎಂಪಿಎಂಸಿ ಆವರಣದಲ್ಲಿ ಕೊಬ್ಬರಿ ಕೇಂದ್ರವನ್ನು ತೆರೆದು ಮಧ್ಯವರ್ತಿಗಳು ಮತ್ತು ರಾಜಕೀಯ ಪ್ರಭಾವಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ನಿಜವಾದ ರೈತರ ಹೆಸರನ್ನು ನೋಂದಣಿ ಮಾಡಿಲ್ಲ. ಅಲ್ಲದೇ, ಕೇವಲ ಎರಡೇ ದಿನದಲ್ಲಿ ಖರೀದಿ ಕೇಂದ್ರ ಮುಚ್ಚಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದೆ. ನೋಂದಣಿ ಮಾಡಿದ ಇಬ್ಬರೂ ಅಧಿಕಾರಿಗಳನ್ನು ಈ ತಕ್ಷಣ ಅಮಾನತ್ತಿನಲ್ಲಿಡಬೇಕು. ಪ್ರಸ್ತುತ ನಡೆದಿರುವ ನೋಂದಣಿ ರದ್ದು ಮಾಡಿ ರೈತರ ಕೊಬ್ಬರಿ ಖರೀದಿಗೆ ಮರು ನೋಂದಣಿ ಪ್ರಕಿಯೆ ಆರಂಭಿಸಬೇಕು. ಇಲ್ಲದಿದ್ದರೆ ಕೊಬ್ಬರಿ ಖರೀದಿ ತಡೆ ಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಖಂಜಾಚಿ ಬೋರೇಗೌಡ ಮಾತನಾಡಿ, ತಾಲೂಕಿನಲ್ಲಿ ನೆಪ ಮಾತ್ರಕ್ಕೆ ಕೊಬ್ಬರಿ ಖರೀದಿ ಕೇಂದ್ರವನ್ನು ಆರಂಭಿಸಿ ರಾಜಕೀಯ ಪ್ರಭಾವಿ ವ್ಯಕ್ತಿಗಳು ಮತ್ತು ದಲ್ಲಾಳಿಗಳ ಮನೆ ಮನೆಗೆ ಹೋಗಿ ನೋಂದಣಿ ಮಾಡಲಾಗಿದೆ. ಈ ಅಕ್ರಮವನ್ನು ನಾವು ಖಂಡಿಸುತ್ತೇವೆ. ರೈತರಿಗೆ ನ್ಯಾಯ ಬದ್ಧವಾಗಿ ನೋಂದಣಿ ಮಾಡಿ ಕೊಬ್ಬರಿ ಖರೀದಿಸಬೇಕೆಂದು ಆಗ್ರಹಿಸಿದರು.ಬಳಿಕ ತಾಲೂಕು ಕಚೇರಿಯ ಅಧಿಕಾರಿಗಳಿಗೆ ಮನವಿಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ರಾಜಣ್ಣ, ಹೋಬಳಿ ಅಧ್ಯಕ್ಷ ತಿಮ್ಮೇಗೌಡ, ಸಿದ್ದಲಿಂಗಯ್ಯ, ಕಿರಣ್, ಚಿಕ್ಕೇಗೌಡ, ಪುಟ್ಟೇಗೌಡ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.