ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ₹1.19ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಬುಧವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಜಿಲ್ಲಾ ಹಾಗೂ ತಾಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಮಾತನಾಡಿ, ಆಲ್ದಾಳ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ₹1.19 ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದರಿಂದಾಗಿ ದಸಂಸ ಕಳೆದ ತಿಂಗಳು ಈ ಕುರಿತು ಮಾಹಿತಿ ಹಕ್ಕನಡಿ ಮಾಹಿತಿ ಕೇಳಿದರೂ ನೀಡುತ್ತಿಲ್ಲ ಎಂದು ಆರೋಪಿಸಿದರು.ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಕೇಳಿದರೆ ಪಿಡಿಓ ಹಾರಿಕೆ ಉತ್ತರ ನೀಡುತ್ತಿದ್ದಾರೆ. 15ನೇ ಹಣಕಾಸಿನ ಯೋಜನೆಯಡಿ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಪ್ರತಿ ಹಳ್ಳಿಗಳನ್ನು ಗ್ರಾಮ ಸ್ವರಾಜ್ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಪಂಚಾಯಿತಿಗಳಿಗೆ ಹಣದ ಹೊಳೆ ಹರಿಸುತ್ತಿವೆ. ಆದರೆ ಯಾವುದೇ ಕಾಮಗಾರಿ ಕೈಗೊಳ್ಳದೆ ಸಂಬಂಧಿಸಿದ ಅಧಿಕಾರಿಗಳು ಅನುದಾನ ಲೂಟಿಯಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಜಲಜೀವನ್ ಮಿಷನ್ ಯೋಜನೆಯಡಿಯ ಕಾಮಗಾರಿಗೆ 26 ಲಕ್ಷ ರು.ಗಳು ಮೀಸಲಿರಿಸಲಾಗಿತ್ತು. ಆದರೆ ಕಾಮಗಾರಿ ನಿರ್ವಹಿಸದೆ ಅಂದಿನ ಅಧ್ಯಕ್ಷರು ಮತ್ತು ಪಿಡಿಓ ಸೇರಿ ಹಿಂದಿನ ಕಾಮಗಾರಿ ತೋರಿಸಿ ಖೊಟ್ಟಿ ಬಿಲ್ ಮಾಡಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಸಂಘಟನ ಸಂಚಾಲಕ ನಾಗರಾಜ ಓಕಳಿ ಮಾತನಾಡಿ, ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ವಾರದ ಒಳಗಾಗಿ ಸೂಕ್ತ ತನಿಖೆ ಮಾಡಿಸಬೇಕು. ತಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಡಿ.3ರಂದು ತಾಪಂ ಕಾರ್ಯಾಲಯಕ್ಕೆ ಮುಳ್ಳುಬೇಲಿ ಹಚ್ಚಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಜಿಪಂಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯಿಯಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರಿಗೆ ಸಲ್ಲಿಸಿದರು. ಮುಖಂಡರಾದ ಮಲ್ಲಣ್ಣ ವಜ್ಜಲ್, ನಾಗು ಗೋಗಿಕೇರಾ, ರಮೇಶ ಪೂಜಾರಿ, ಭೀಮಣ್ಣ ಅಡ್ಡೂಡಗಿ, ಶಿವಣ್ಣ ನಾಗರಾಳ, ಸೇರಿದಂತೆ ಇತರರಿದ್ದರು.