ರಸ್ತೆ ಅಭಿವೃದ್ಧಿ ನೆಪದಲ್ಲಿ ಮರ ಕತ್ತರಿಸಿದ ದುಷ್ಕರ್ಮಿಗಳು: ತಡೆಯಲು ಹೋದ ಅಧಿಕಾರಿಗೆ ಹಲ್ಲೆ

KannadaprabhaNewsNetwork |  
Published : Apr 25, 2026, 02:00 AM IST
ಬಳ್ಳಾರಿಯ ವಿದ್ಯಾನಗರ ಬಳಿಯ ಕೊಳಗಲ್ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳು.  | Kannada Prabha

ಸಾರಾಂಶ

ಮರ ಕತ್ತರಿಸಲು ಅನುಮತಿ ಕೇಳಿದಾಗ ಹಾರಿಕೆ ಉತ್ತರ ನೀಡಿದ ಗುತ್ತಿಗೆದಾರನ ಸಹಚರರು ಕಾಮಗಾರಿ ತುರ್ತಾಗಿ ಆಗಬೇಕಿದೆ

ಬಳ್ಳಾರಿ: ರಸ್ತೆ ಅಗಲೀಕರಣ ಕಾಮಗಾರಿಯ ನೆಪದಲ್ಲಿ ಯಾವುದೇ ಅನುಮತಿ ಇಲ್ಲದೆ ಗುತ್ತಿಗೆದಾರನೊಬ್ಬನ ಸಹಚರರು ಅಕ್ರಮವಾಗಿ ಮರಗಳನ್ನು ಕಟಾವು ಮಾಡುತ್ತಿರುವುದನ್ನು ತಡೆಯಲು ಹೋದ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಅನುಚಿತವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಇಲ್ಲಿನ ವಿದ್ಯಾನಗರ ಬಳಿಯ ಕೊಳಗಲ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ಜರುಗಿದೆ.

ಗುತ್ತಿಗೆದಾರ ಅರಣ್ಯ ಇಲಾಖೆ ಅನುಮತಿಯಿಲ್ಲದೇ ಮರಗಳಿಗೆ ಕೊಡಲಿ ಹಾಕುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಆರ್. ಚೌವ್ಹಾಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮರ ಕತ್ತರಿಸಲು ಅನುಮತಿ ಕೇಳಿದಾಗ ಹಾರಿಕೆ ಉತ್ತರ ನೀಡಿದ ಗುತ್ತಿಗೆದಾರನ ಸಹಚರರು ಕಾಮಗಾರಿ ತುರ್ತಾಗಿ ಆಗಬೇಕಿದೆ ಎಂಬ ಹಾರಿಕೆ ಉತ್ತರದೊಂದಿಗೆ ಮರ ಕಟಾವು ಮುಂದುವರಿಸಿದ್ದಾರೆ. ಇದನ್ನು ತಡೆಯಲು ಪ್ರಯತ್ನಿಸಿದಾಗ ಗುತ್ತಿಗೆದಾರರ ಸಹಚರರಾದ ತಿಲ್ಲು ಮತ್ತು ರವಿ ಮೋಕಾ ಎಂಬುವವರು ವಾಗ್ವಾದಕ್ಕಿಳಿದು, ಕೃತ್ಯವನ್ನು ಚಿತ್ರೀಕರಿಸುತ್ತಿದ್ದ ಅಧಿಕಾರಿಯ ಮೊಬೈಲ್ ಫೋನ್ ಕಿತ್ತುಕೊಂಡು ನೆಲಕ್ಕೆ ಎಸೆದು ಹಾನಿಗೊಳಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮರ ಕಟಾವು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಧಿಕಾರಿಯ ಮೊಬೈಲ್ ಹಾನಿಗೊಳಿಸಿದ ಆರೋಪದ ಮೇಲೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾತ್ರಿ 10:30ರ ಸುಮಾರಿಗೆ ಚೈನಾಜ್ 1.10 ಕಿ.ಮೀ ನಿಂದ 1.60 ಕಿ.ಮೀ ವರೆಗೆ ರಸ್ತೆ ಬದಿಯ ಮರಗಳನ್ನು ಅಕ್ರಮವಾಗಿ ಕಟಾವು ಮಾಡಲಾಗಿದೆ. ಸ್ಥಳ ಪರಿಶೀಲನೆಯಲ್ಲಿ 25 ಮರಗಳನ್ನು (21 ತಪಸಿ, 2 ಬೇವು, 2 ಅರಳಿ) ಅಕ್ರಮವಾಗಿ ಕಟಾವು ಮಾಡಿರುವುದು ಪತ್ತೆಯಾಗಿದೆ. ಅಂದಾಜು 5 ಟನ್ ಸೌದೆಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಶ್ರೀನಿವಾಸ್ (ಶ್ರೀನಿವಾಸ್ ಇನ್ಫ್ರಾಪ್ರಾಜೆಕ್ಟ್ ಪ್ರೈ. ಲಿ) ಮತ್ತು ಇತರ ನಾಲ್ವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಸಾಕ್ಷ್ಯ ನಾಶಪಡಿಸಿದ ಹಿನ್ನೆಲೆಯಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಲಾಗಿದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್. ತಿಳಿಸಿದ್ದಾರೆ.

ಈ ರಸ್ತೆ ಕಾಮಗಾರಿಗಾಗಿ ಒಟ್ಟು 233 ಮರಗಳ ಕಟಾವಿಗೆ ಲೋಕೋಪಯೋಗಿ ಇಲಾಖೆ ಅನುಮತಿ ಕೋರಿತ್ತು. ಆದರೆ, ಪರಿಸರ ಸಂರಕ್ಷಣೆ ದೃಷ್ಟಿಯಿಂದ 139 ಮರಗಳನ್ನು ಉಳಿಸಿಕೊಂಡು ಫುಟ್‌ಪಾತ್ ವಿನ್ಯಾಸ ಬದಲಿಸುವಂತೆ ಅರಣ್ಯ ಇಲಾಖೆಯು ಮಾರ್ಚ್ 23ರಂದೇ ಪತ್ರ ಬರೆದಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಗುತ್ತಿಗೆದಾರರು, ಏಕಾಏಕಿ ತಡರಾತ್ರಿ ಈ ದುಷ್ಕೃತ್ಯ ಎಸಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಬಸವರಾಜ ಕೆ.ಎನ್ ತಿಳಿಸಿದ್ದಾರೆ.

ರಾಜಕೀಯ ನಾಯಕನ ಬೆಂಬಲದಿಂದ ಮರಗಳಿಗೆ ಕೊಡಲಿ?:

ಬಳ್ಳಾರಿಯ ಕೊಳಗಲ್ ರಸ್ತೆಯ ಬದಿ ಬೆಳೆದಿರುವ ನೂರಾರು ಮರಗಳನ್ನು ಕತ್ತರಿಸುವ ಹುನ್ನಾರ ಕಳೆದ ಆರು ತಿಂಗಳ ಹಿಂದಿನಿಂದಲೂ ನಡೆಯುತ್ತಿದೆ. ರಾಜಕೀಯ ನಾಯಕರೊಬ್ಬರ ಬೆಂಬಲದಿಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಲೆಕ್ಕಿಸದೆ ಗುತ್ತಿಗೆದಾರನ ಹಿಂಬಾಲಕರು ರಾತ್ರೋರಾತ್ರಿ ಮರಗಳನ್ನು ಕತ್ತರಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿಯದೇ ಅಧಿಕಾರಿಗಳು ಮರಗಳಿಗೆ ಕೊಡಲಿ ಹಾಕಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!