ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ಗಣಪತಿ ಮತ್ತು ನಾಗರ ವಿಗ್ರಹ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕೃತ್ಯದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು.
ಘಟನೆಯ ಕುರಿತು ಸ್ಥಳೀಯರೊಂದಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಚರ್ಚೆ ನಡೆಸಿದ್ದು, ದೇವರ ವಿಗ್ರಹಗಳ ಎದುರು ಭಾಗದಲ್ಲಿರುವ ಅನ್ಯಕೋಮಿನ ಮನೆ ಅಕ್ರಮವಾಗಿ ನಿರ್ಮಿಸಿದ್ದು, ಆ ಮನೆಯ ನಿವಾಸಿಗಳು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಈ ದೇವರ ವಿಗ್ರಹಗಳನ್ನು ನೋಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಈ ಘಟನೆ ಸ್ಥಳೀಯ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಚನ್ನಬಸಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ, ಅಕ್ರಮವಾಗಿ ನಿರ್ಮಿಸಲಾದ ಮನೆಯ ದಾಖಲಾತಿಗಳನ್ನು ಪರಿಶೀಲಿಸಿ, ಅದು ಅಕ್ರಮವಾಗಿದ್ದರೆ ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರಲ್ಲದೆ, ಬಂಗಾರಪ್ಪ ಬಡಾವಣೆಯಲ್ಲಿ ವಾಸಿಸುತ್ತಿರುವ ಹಿಂದೂ ಜನಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆಯೂ ಪೊಲೀಸ್ ಇಲಾಖೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ಮಂಜುನಾಥ್ ಕೆ.ನವಲೆ, ಮಾಧ್ಯಮ ಸಂಚಾಲಕ ಶ್ರೀನಾಗ, ಸ್ಥಳೀಯ ಪ್ರಮುಖರು, ಮತ್ತು ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಪರಿಸ್ಥಿತಿ ಶಾಂತಿಯುತವಾಗಿದೆ
ಪರಿಸ್ಥಿತಿ ಶಾಂತಿಯುತವಾಗಿದೆ. ಯಾವುದೇ ಹಿಂಸಾಚಾರ ಸಂಭವಿಸಿಲ್ಲ. ಈ ಸಂಬಂಧ ಇಬ್ಬರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಸುಳ್ಳು ಸುದ್ದಿಗೆ ಅಥವಾ ಜನರಲ್ಲಿ ಅನಗತ್ಯ ಭೀತಿಗೆ ಅವಕಾಶ ನೀಡಬೇಡಿ. ಕಾನೂನು ಉಲ್ಲಂಘಿಸುವವರೇ ಆಗಿರಲಿ, ಯಾರಿಗೂ ಬಿಡುವುದಿಲ್ಲ. ಕಠಿಣ ಶಿಕ್ಷೆ ನೀಡಲಾಗುವುದು. ಈ ಪ್ರಕರಣದಲ್ಲಿ ಅಟ್ಟ್ರಾಸಿಟಿ ಸೆಕ್ಷನ್‌ಗಳನ್ನೂ ಜಾರಿಗೆ ತಂದಿದ್ದೇವೆ. ಡಿವೈಎಸ್‌ಪಿ ತನಿಖೆ ನಡೆಸಲಿದ್ದಾರೆ. ಗಲಾಟೆ ಮಾಡುವವರನ್ನು ಕ್ಷಮಿಸೋದಿಲ್ಲ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಮುಸ್ಲಿಂ ಗೂಂಡಾಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಾ
ರಾಗಿಗುಡ್ಡದ ಮುಸಲ್ಮಾನ್ ಗೂಂಡ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾನೆ. ಇದಕ್ಕಾಗಿ ಗಣಪತಿ ವಿಗ್ರಹಕ್ಕೆ ಒದ್ದಿದ್ದಾನೆ. ನಾಗರ ವಿಗ್ರಹವನ್ನು ಚರಂಡಿಗೆ ಎಸೆದಿದ್ದಾನೆ. ಸಿಎಂ ಸಿದ್ದರಾಮಯ್ಯನವರೇ ಮುಸಲ್ಮಾನ್ ಗೂಂಡಾಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಾ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಭಾನುವಾರ ರಾಗಿಗುಡ್ಡಕ್ಕೆ ಭೇಟಿ ಘಟನಾ ಸ್ಥಳವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಜನ ತಾಳ್ಮೆಯಿಂದ ಇದ್ದಾರೆ. ಈ ಘಟನೆಗೆ ಕಾರಣರಾದ ಮೂರು ಮುಸಲ್ಮಾನ್ ಗೂಂಡಾಗಳನ್ನು ಅರೆಸ್ಟ್ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಪಾಲಿಕೆ ಅವರೂ ಅಕ್ರಮ ಕಟ್ಟಡವನ್ನು ಕೆಡುವುದಾಗಿ ತಿಳಿಸಿದ್ದಾರೆ.
ಆದರೆ, ನಮ್ಮ ದೇವರನ್ನು ಮುಸಲ್ಮಾನ್ ಬೂಟ್ ಕಾಲಿನಲ್ಲಿ ಒದ್ದಾಗ ನಮಗೆ ಏನು ಅನಿಸಬೇಕು. ಇದನೆಲ್ಲ ನೋಡಿದಾಗ ನಾವು ಸುಮ್ಮನಿರಬೇಕಾ? ತಕ್ಷಣ ಇಂಥಹ ಗೂಂಡಾಗಳನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಈ ಸ್ಥಳಕ್ಕೆ ಬರಬೇಕು. ಪರಿಶಿಷ್ಟ ಜಾತಿ ವರ್ಗಗಳ ಜನ ವಾಸ ಮಾಡುವ ಜನ ಇಲ್ಲಿದ್ದಾರೆ. ಇಂಥ ಪರಿಶಿಷ್ಟ ಜನ ಪೂಜೆ ಮಾಡುವ ದೇವರಿಗೆ ಅಪಮಾನ ಆಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಶಿವಮೊಗ್ಗ ಬಂದು ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಸ್ಪಿ, ಡಿಸಿ, ಪಾಲಿಕೆ ಆಯುಕ್ತರು ಅಗತ್ಯ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ, ಉಡುಪಿ, ಮಂಗಳೂರುಗಳಲ್ಲಿ ಸ್ಕ್ವಾಡ್ ಮಾಡಿದರೆ ಉಪಯೋಗ ಇಲ್ಲ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಾಗ ಸ್ಕ್ವಾಡ್ ಗೆ ಬೆಲೆ ಬರುತ್ತದೆ ಎಂದು ಹರಿಹಾಯ್ದರು.
ಆರೋಪಿ ಹೇಳಿಕೆಯ ವಿಡಿಯೋ ವೈರಲ್
ಘಟನೆಯ ಆರೋಪಿ ಸೈಯದ್ ಎಂಬಾತ ಘಟನೆ ಸಂಬಂಧ ನೀಡಿರುವ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈಕೋರ್ಟ್ ವಕೀಲ ಸಿದ್ದಿಕಿ ಎಂಬುವರ ಮನೆ ನಿರ್ಮಾಣವಾಗುತ್ತಿದೆ. ಇದರ ಮುಂಭಾಗದ ಸರ್ಕಾರಿ ಜಾಗದಲ್ಲಿ ಪಾರ್ಕ್‌ಗೆ ಜಾಗ ಮೀಸಲಿಟ್ಟಿದ್ದು, ಇಲ್ಲಿ ಹಿಂದು ಜನಾಂಗದವರು ತುಳಸಿ ಕಟ್ಟೆ ನಿರ್ಮಿಸಿದ್ದರು. ಈ ಕಟ್ಟೆಕಟ್ಟಿ ಎರಡು ಮೂರು ದಿನ ಆಗಿತ್ತು. ಇವಾಗ್ಲೇ ಬಿಟ್ಟುಕೊಂಡ್ರೆ ಜಾಸ್ತಿ ಆಗುತ್ತೆ. ಇದು ಇಲ್ಲಿ ಇರುವುದು ಬೇಡ. ಎಂದು ನಾನು ಸ್ಥಳೀಯ ನಿವಾಸಿಗಳಿಗೆ ಯಾರು ಇದನ್ನು ಕಟ್ಟಿದ್ದು ಎಂದು ಕೇಳಿದೆ. ಮುಸ್ಲಿಂ ಮನೆ ನಮ್ದು, ಬೆಳಗ್ಗೆ ಎದ್ದು ನಾವು ದೇವಸ್ಥಾನ ನೋಡಬೇಕಾ? ಎಂದು ನಾನೇ ಕಾಲಿಂದ ಅದನ್ನು ಒದ್ದೆ. ನಂತರ ಹೇಗಿತ್ತೋ ಹಾಗೆ ಜೋಡಿಸಿದ್ದೇವೆ. ಅಲ್ಲಿದ್ದ ಊರಿನವರ ಕ್ಷಮೆ ಕೇಳಿದ್ದೇನೆ. ಜನ ಎಲ್ಲ ಒಪ್ಪಿ, ಜನ ಈಗ ಏನು ಇಲ್ಲ ಇಲ್ಲಿಂದ ಹೋಗು ಎಂದು ವಿಡಿಯೋದಲ್ಲಿ ಹೇಳಿದ್ದಾನೆ.