ಕಲಘಟಗಿ:
ಕಳೆದ ಒಂದು ದಶಕದಿಂದ ಗ್ರಾಮದ ಪ್ರಮುಖ ರಸ್ತೆ ಸುಧಾರಣೆ ಕಾಣದಿರುವುದು, ಹಲವು ಸಮಸ್ಯೆಗಳಿಗೆ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೇಸತ್ತು ಬುಧವಾರ ಬಂದ್‌ಗೆ ಕರೆ ನೀಡಿದ್ದರು. ಮುಷ್ಕರಕ್ಕೆ ಸ್ಪಂದಿಸಿದ ಗ್ರಾಮಸ್ಥರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ-ಕಾಲೇಜು ಹೊರತು ಪಡಿಸಿ ಎಲ್ಲವೂ ಬಂದ್ ಆಗಿದ್ದವು.
ಗ್ರಾಮದ ಪ್ಯಾಟಿ ಬಸವೇಶ್ವರ ದೇವಾಲಯದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿ ನೀಲವ್ವನ ಮಡ್ಡಿ, ಬಾಪೂಜಿ ಕಾಲನಿ, ಹೊರಕೇರಿ, ಮನಗುಂಡ್ಡಿ ಓಣಿ, ಸುಣಗಾರ ಓಣಿ, ಜಾಡಗೇರಿ ಓಣಿ ಹಾಗೂ ಮಧ್ಯಾಹ್ನ ಓಣಿಯಿಂದ ಪುನಃ ಪ್ಯಾಟಿ ಬಸವೇಶ್ವರ ದೇವಾಲಯಕ್ಕೆ ಬಂದು ಸಮಾರೋಪಗೊಂಡಿತು.ಈ ವೇಳೆ ಗ್ರಾಮಸ್ಥ ಮುತ್ತು ಪಾಟೀಲ ಮಾತನಾಡಿ, ದಶಕ ಕಳೆದರೂ ರಸ್ತೆ ಕಾಮಗಾರಿ ಮಾಡದ ಅಧಿಕಾರಿ, ಗುತ್ತಿಗೆದಾರರ ವರ್ತನೆಗೆ ಬೇಸತ್ತು ಗ್ರಾಮದ ಯುವಕರು, ಹಿರಿಯರು ಬೀದಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ, ಸಚಿವರಿಗೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಗ್ರಾಮದ ಪ್ರಮುಖ ರಸ್ತೆ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ರಸ್ತೆ ಕಾಮಗಾರಿ ಆರಂಭಿಸುವ ವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಕುಳಿತು ಘೋಷಣೆ ಕೂಗಿದರು. ನಂತರ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪರಿಣಾಮ ವಾಹನಗಳು ಓಡಾಡಲು ಪರದಾಡುವಂತಾಯಿತು. ಸ್ಥಳಕ್ಕೆ ಆಗಮಿಸಿದ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನಾಕಾರರು ಮುಷ್ಕರ ಕೈಬಿಟ್ಟರು.