ಕನ್ನಡಪ್ರಭ ವಾರ್ತೆ ಸೊರಬ
ಅರ್ಹತೆಯುಳ್ಳವರಿಗೆ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಇರುವುದೇ ಬಡವರಿಗಾಗಿ. ಬಿಪಿಎಲ್ ಕಾರ್ಡ್ ರದ್ದತಿ ವಿಷಯದಲ್ಲಿ ವಿಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡಿ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಯಾರೂ ಕೂಡ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಭಾನುವಾರ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ಕುಮಟಾ-ಕಡಮಡಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಸರಪಳಿ 101.40 ರಿಂದ 115.60 ಕಿಮೀ ವರೆಗಿನ ರಸ್ತೆ ಅಭಿವೃದ್ಧಿ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-05ಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಮತ್ತು ಸಾಕಾರ ವಿಪಕ್ಷಗಳ ಕಣ್ಣು ಕುಕ್ಕುತ್ತಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಹುರುಳಿದ ಆರೋಪಗಳನ್ನು ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಅರ್ಹತೆ ಇದ್ದವರಿಗೆ ಬಿಪಿಎಲ್ ಕಾರ್ಡ್ ಸಿಕ್ಕೇ ಸಿಗುತ್ತದೆ ಎಂದು ಪುನರುಚ್ಚರಿಸಿದರು.ಸುಮಾರು 57 ಸಾವಿರ ಕೋಟಿ ರು. ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗವಾಗುತ್ತಿದ್ದು, ಸರ್ಕಾರದಲ್ಲಿ ಭ್ರಷ್ಟಾಚಾರ, ಲಂಚ ಎನ್ನುವುದು ಇಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರದಲ್ಲಿ ವಿಕಾಸ ಯೋಜನೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಹಣ ಘೋಷಿಸಿ ತೆಗೆದಿಟ್ಟಿದ್ದು ಪುಡಿಗಾಸು ಮಾತ್ರ. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯಾದ್ಯಂತ ವಿವಿಧ ಕಾಮಗಾರಿಗಳನ್ನು ತೆಗೆದುಕೊಂಡ ಬಿಜೆಪಿ ಪೂರ್ಣಗೊಳಿಸದೇ ಅಭಿವೃದ್ಧಿಗಾಗಿ ಮಾಡಿದ ಸಾಲದ ಬಾಕಿಯನ್ನು ಉಳಿಸಿ ನಮ್ಮ ಸರ್ಕಾರದ ಮೇಲೆ ಹೊರೆ ಇರಿಸಿದ್ದಾರೆ ಎಂದರು.
ಕ್ಷೇತ್ರದ ಮಾಜಿ ಶಾಸಕರೊಬ್ಬರು ತಾವು ಮಾಡಿದ ಕಾರ್ಯಕ್ರಮಗಳಿಗೆ ಈಗಿನ ಸಚಿವರು ಗುದ್ದಲಿಪೂಜೆ ನೆರವೇರಿಸುತ್ತಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಆದರೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರೂಪಿಸಿದ ಮತ್ತು ಬಿಡುಗಡೆಯಾದ ಅನುದಾನದ ಹಣವನ್ನು ತಮ್ಮದೆಂದು ಬಿಂಬಿಸುತ್ತಿದ್ದಾರೆ. ಹಾಗಾಗಿ ಅವರು ನಡೆಸಿದ ಕಾರ್ಯಕ್ರಮಗಳು ತಮ್ಮದೇ ಹಣದಿಂದ ಎನ್ನುವುದನ್ನು ಮರೆತ್ತಿದ್ದಾರೆ. ಜನರಿಂದ ತಿರಸ್ಕೃತಗೊಂಡು ಕಾಣೆಯಾದವರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಮ್ಮ ಸಹೋದರ ಕುಮಾರ ಬಂಗಾರಪ್ಪ ಅವರ ಹೆಸರು ಹೇಳದೇ ಲೇವಡಿ ಮಾಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಂಜುಳಾ ಹೆಗಡಾಳ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ಪ್ರದೀಪ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆಜಯಶೀಲಗೌಡ, ಸದಾನಂದಗೌಡ ಬಿಳಗಲಿ, ಪುರಸಭೆ ಸದಸ್ಯರಾದ ಶ್ರೀರಂಜನಿ, ಡಿ.ಎಸ್. ಪ್ರಸನ್ನಕುಮಾರ್, ಅನ್ಸರ್ ಅಹ್ಮದ್ ಸೇರಿದಂತೆ ಪಿಡಬ್ಲೂö್ಯಡಿ ಇಲಾಖೆ ಅಭಿಯಂತರರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.