ಶ್ರೀ ಕ್ಷೇತ್ರ ಧರ್ಮಸ್ಥಳದ ಬಗೆಗಿನ ಅಪಪ್ರಚಾರ ಖಂಡನೀಯ: ಮಾಜಿ ಸಚಿವ ಹಾಲಪ್ಪ

KannadaprabhaNewsNetwork |  
Published : Aug 22, 2025, 12:00 AM IST
ಬೃಹತ್ ಪ್ರತಿಭಟನೆ ನಡೆಯಿತು | Kannada Prabha

ಸಾರಾಂಶ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ಜನಾಗ್ರಹ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ಜನಾಗ್ರಹ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಮಹಾಗಣಪತಿ ದೇವಸ್ಥಾನದ ಆವರಣದಿಂದ ಹಮ್ಮಿಕೊಂಡಿದ್ದ ಬೃಹತ್ ಜನಾಕ್ರೋಶ ಯಾತ್ರೆಗೆ ತಾಳಗುಪ್ಪ ಕೂಡ್ಲಿಮಠದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಬಳಸಗೋಡು ಭೃಂಗೇಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಷಡ್ಯಂತ್ರ ನಡೆಸುವವರ ವಿರುದ್ದ ಘೋಷಣೆ ಕೂಗುತ್ತಾ ಸಾಗಿದ ಜನಾಕ್ರೋಶ ಮೆರವಣಿಗೆಯು ಗಾಂಧಿ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಹೆಚ್.ಹಾಲಪ್ಪ ಮಾತನಾಡಿ, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಯಾರೇ ಅಪಪ್ರಚಾರ ಮಾಡಿದರೂ ಧರ್ಮಸ್ಥಳಕ್ಕೆ, ವೀರೇಂದ್ರ ಹೆಗ್ಗಡೆಯವರಿಗೆ ಏನೂ ಹಾನಿಯಾಗುವುದಿಲ್ಲ, ನಮ್ಮವರೇ ನಮ್ಮ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರಕ್ಕೆ ಇಳಿದಿರುವುದು ದುರದೃಷ್ಟಕರ ಸಂಗತಿ ಎಂದರು.

ಉಪ ಮುಖ್ಯಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲು ಎಸ್.ಐ.ಟಿ. ರಚನೆ ಬಗ್ಗೆ ಸಹಮತ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಒಬ್ಬ ಸಚಿವ ವಿರೋಧ ವ್ಯಕ್ತಪಡಿಸಿದರೂ ಎಸ್.ಐ.ಟಿ. ರಚನೆಯಾಗುತ್ತಿರಲಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಸುಮ್ಮನಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗ ಧರ್ಮಸ್ಥಳಕ್ಕೆ ಜೈ ಎನ್ನುತ್ತಿರುವುದು ಏಕೆ. ಧರ್ಮಸ್ಥಳ ಮತ್ತು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ನಡೆದಾಡುವ ದೇವರು ಎಂದು ಸಮಸ್ತ ಹಿಂದೂ ಬಾಂಧವರು ನಂಬಿಕೊಂಡು ಬಂದಿದ್ದಾರೆ. ಅಂತಹ ಪವಿತ್ರ ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡುತ್ತಿರುವವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಪ್ರಯತ್ನ ನಡೆಸುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಹಿಂದೆ ತಿರುಪತಿ, ಕಂಚಿ ಪೀಠ, ಶಬರಿಮಲೆ ಸೇರಿದಂತೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಪಪ್ರಚಾರದ ಮೂಲಕ ಅಪವಿತ್ರಗೊಳಿಸುವ ಪ್ರಯತ್ನ ನಡೆದಿತ್ತು. ಈಗ ಧರ್ಮಸ್ಥಳದ ವಿರುದ್ದ ಅಪಪ್ರಚಾರಕ್ಕಿಳಿದಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಎಸ್.ವಿ.ಹಿತಕರ ಜೈನ್, ವಿಠ್ಠಜ್ ಪೈ ಇನ್ನಿತರರು ಮಾತನಾಡಿದರು. ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಚೇತನರಾಜ್ ಕಣ್ಣೂರು, ಪ್ರಸನ್ನ ಕೆರೆಕೈ, ರಾಜಶೇಖರ ಗಾಳಿಪುರ, ಪ್ರಶಾಂತ್ ಕೆ.ಎಸ್., ಆರ್.ಎಸ್.ಗಿರಿ, ಇಂದೂಧರ ಬಿ.ಎಸ್., ಪ್ರತಿಮಾ ಜೋಗಿ, ಐ.ವಿ.ಹೆಗಡೆ, ಅರಗ ಚಂದ್ರಶೇಖರ್, ಅ.ಪು.ನಾರಾಯಣಪ್ಪ, ಮಧುರಾ ಶಿವಾನಂದ್, ಪ್ರೇಮ ಸಿಂಗ್, ಶ್ರೀನಿವಾಸ್ ಮೇಸ್ತೀ ಇನ್ನಿತರರು ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ