ಶಾಸಕರಿಂದ ಜನರಿಗೆ ತಪ್ಪು ಮಾಹಿತಿ: ಮಠಂದೂರು ಆರೋಪ

KannadaprabhaNewsNetwork | Published : Jul 13, 2024 1:32 AM

ಸಾರಾಂಶ

15 ನೇ ಹಣಕಾಸು ಯೋಜನೆಯಲ್ಲಿ ಬಂದ ಅನುದಾನವನ್ನು ಕೌನ್ಸಿಲರ್‌ಗಳ ಅಭಿಪ್ರಾಯದಂತೆ ಕ್ರಿಯಾಯೋಜನೆ ಮಾಡಬೇಕಾದರೂ ಶಾಸಕರ ನಿರ್ಧಾರದಂತೆ ಕ್ರಿಯಾಯೋಜನೆ ಮಾಡಲಾಗುತ್ತಿದೆ. ಸದಸ್ಯರ ಅಭಿಪ್ರಾಯವನ್ನೇ ಕೇಳುತ್ತಿಲ್ಲ ಆಕ್ಷೇಪ ವ್ಯಕ್ತ ಪಡಿಸಿದರು.

ಕನ್ನಡಪ್ರಭವಾರ್ತೆ ಪುತ್ತೂರು

ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ನಡೆಸಿದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪುತ್ತೂರು ಶಾಸಕರು ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಮನೆಗಳು ಮಂಜೂರುಗೊಂಡಿಲ್ಲ ಎಂದು ಸುಳ್ಳು ಮಾಹಿತಿಯನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುತ್ತಾ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು. ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2022 ರಲ್ಲಿ ರಾಜ್ಯ ಬಿಜೆಪಿ ಸರ್ಕಾರವು 5 ಲಕ್ಷ ಮನೆಗಳನ್ನು ಮಂಜೂರುಗೊಳಿಸಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1400 ಮನೆಗಳನ್ನು ಹಂಚಲಾಗಿತ್ತು. ಈ ಪೈಕಿ ಉಪ್ಪಿನಂಗಡಿ ಗ್ರಾಪಂಗೆ 50, ಬನ್ನೂರು ಗ್ರಾಪಂಗೆ 42 ಮತ್ತು ಕೆದಂಬಾಡಿ ಗ್ರಾಪಂಗೆ 35 ಮನೆಗಳು ಸೇರಿದಂತೆ ಇಡೀ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ ಶಾಸಕ ಅಶೋಕ್ ಕುಮಾರ್ ರೈ ಅವರು ಜಿಲ್ಲಾ ಕೆಡಿಪಿ ಸಭೆಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅಶೋಕ್ ರೈ ಶಾಸಕರಾದ ಮೇಲೆ ಪುತ್ತೂರು ಕ್ಷೇತ್ರಕ್ಕೆ 250 ಮನೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರ 250 ಮನೆಗಳ ಮಾಹಿತಿ ನೀಡುವ ಭರದಲ್ಲಿ ಇಡೀ ಕ್ಷೇತ್ರಕ್ಕೆ ಬಂದ 1400 ಮನೆಗಳ ಮಾಹಿತಿಯನ್ನು ಮರೆ ಮಾಚುವ ಕೆಲಸ ಮಾಡಿದ್ದಾರೆ ಎಂದು ಆಪಾದಿಸಿದರು.ಕೋವಿಡ್ ಬಳಿಕ ಇದೀಗ ರಾಜ್ಯದಲ್ಲಿ ಡೆಂಘಿ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಮಂದಿ ಡೆಂಘಿ ಪೀಡಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ರಾಜ್ಯದ ಆರೋಗ್ಯ ಮಂತ್ರಿಯಾಗಿದ್ದರೂ ಜಿಲ್ಲೆಯ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜಕಾರಣ ಮಾಡುವುದರಲ್ಲೇ ತಲ್ಲೀನರಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖಂಡರು ಒಂದು ಸುಳ್ಳನ್ನು ಹತ್ತು ಬಾರಿ ಹೇಳುವ ಮೂಲಕ ಅದನ್ನು ಸತ್ಯ ಎಂದು ಸಾಬೀತು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಪುತ್ತೂರು ನಗರಸಭೆಯ ಮೊದಲ ಅವಧಿ ಆಡಳಿತ ಮುಗಿದು ರೋಸ್ಟರ್ ಪದ್ಧತಿಯಂತೆ ಕಳೆದ ವರ್ಷ ಮೇ ತಿಂಗಳಲ್ಲಿ ಹೊಸ ಅವಧಿಯ ಅಧ್ಯಕ್ಷತೆಗೆ ಮೀಸಲಾತಿ ಪ್ರಕಟವಾಗಬೇಕಿತ್ತು. ಆದರೆ ಅವಧಿ ಮುಗಿದು 14 ತಿಂಗಳು ಕಳೆದರೂ ಇನ್ನೂ ಮೀಸಲು ಪಟ್ಟಿ ಪ್ರಕಟಗೊಂಡಿಲ್ಲ. ಇನ್ನೊಂದು ವರ್ಷ ಕಳೆದರೆ ನಗರಸಭೆಯ ಅವಧಿಯೇ ಮುಗಿದು ಹೋಗುತ್ತದೆ. ನಗರದಲ್ಲಿ ಜಲಸಿರಿ ಸಮಸ್ಯೆ ಮುಗಿಲು ಮುಟ್ಟಿದೆ. ಬಿಜೆಪಿಯ 25 ಸದಸ್ಯರು ಬಹುಸಂಖ್ಯಾತರಾಗಿದ್ದರೂ ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ನಡೆಸುವ ಸ್ಥಿತಿಯಲ್ಲಿಲ್ಲ. ಹುಲ್ಲು ಕೀಳುವ ಕೆಲಸ ಕೂಡ ನಗರಸಭೆಯಲ್ಲಿ ನಡೆಯುತ್ತಿಲ್ಲ. ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಅವರು ಬಂದು ಸಭೆ ಮಾಡಿಲ್ಲ. 14 ತಿಂಗಳಲ್ಲಿ ಕೌನ್ಸಿಲ್ ಮೀಟಿಂಗ್ ಮಾಡಿಲ್ಲ. ನಗರಸಭೆಯ ಸ್ಥಿತಿ ಅಧೋಗತಿಗೆ ತಲುಪಿದೆ. ಚುನಾಯಿತ ಪ್ರತಿನಿಧಿಗಳ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. 15 ನೇ ಹಣಕಾಸು ಯೋಜನೆಯಲ್ಲಿ ಬಂದ ಅನುದಾನವನ್ನು ಕೌನ್ಸಿಲರ್‌ಗಳ ಅಭಿಪ್ರಾಯದಂತೆ ಕ್ರಿಯಾಯೋಜನೆ ಮಾಡಬೇಕಾದರೂ ಶಾಸಕರ ನಿರ್ಧಾರದಂತೆ ಕ್ರಿಯಾಯೋಜನೆ ಮಾಡಲಾಗುತ್ತಿದೆ. ಸದಸ್ಯರ ಅಭಿಪ್ರಾಯವನ್ನೇ ಕೇಳುತ್ತಿಲ್ಲ ಆಕ್ಷೇಪ ವ್ಯಕ್ತ ಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಉಪ್ಪಿನಂಗಡಿ ಪಂಚಾಯಿತಿ ಮಾಜಿ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಕೆದಂಬಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ಬನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಾ, ಕಬಕ ಗ್ರಾಪಂ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಉಪಸ್ಥಿತರಿದ್ದರು.

Share this article