ಬೇಡ್ತಿ-ವರದಾ ನದಿ ತಿರುವು ಕುಡಿಯುವ ನೀರಿನ ಯೋಜನೆಯೇ ಅಲ್ಲ
ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಹಾವೇರಿ ಭಾಗದ ಜನರ ಕುಡಿಯುವ ನೀರಿಗಾಗಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಇದು ಕುಡಿಯುವ ನೀರಿನ ಯೋಜನೆಯೇ ಅಲ್ಲ, ಜತೆಗೆ ಸರ್ಕಾರದ ವೆಬ್ಸೈಟ್‌ನಲ್ಲಿ ದೊರೆತ ದಾಖಲೆಗಳ ಪ್ರಕಾರ ರಾಯಚೂರು ಜಿಲ್ಲೆಗೆ ನೀರಾವರಿಗೆ ಎಂದು ಈ ಯೋಜನೆ ಸಿದ್ಧಪಡಿಸಲಾಗಿದೆ. ರಾಯಚೂರಿಗೆ ನೀರು ಬೇಕಿದ್ದಲ್ಲಿ ಹಾವೇರಿ ಭಾಗದವರು ಹೋರಾಟ ಮಾಡುವುದು ನೋಡಿದರೆ, ಇದರ ಲಾಭ ಬೇರೆ ಏನೋ ಇದ್ದಂತೆ ಕಾಣುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಡಿಯುವ ನೀರಿನ ಹೆಸರಿನಲ್ಲಿ ನೀರಾವರಿ ಉದ್ದೇಶಕ್ಕಾಗಿಯೇ ಅನುಷ್ಠಾನ ಮಾಡುವ ಯೋಜನೆಯಾದರೆ ಅದು ಖಂಡಿತ ಅರ್ಥಹೀನ. ನಮ್ಮ ಜಿಲ್ಲೆಯಲ್ಲಿಯೇ ನೀರಾವರಿಗೆ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಸ್ವರ್ಣವಲ್ಲೀ ಶ್ರೀಗಳು ಯೋಜನೆಯ ತಡೆಗೆ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ. ಗುರುಗಳ ಮಾತಿಗೆ ಕಟಿ ಬದ್ಧರಾಗಿರುವುದು ಎಲ್ಲರ ಕರ್ತವ್ಯ. ನಮ್ಮ ಜಿಲ್ಲೆಯ ಜನರಿಗಾಗಿ ಈ ನದಿಗಳ ನೀರನ್ನು ಬಳಸುವ ಯೋಜನೆಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈಗಿನ ಯೋಜನೆ ಪ್ರಕಾರ ಭಾರಿ ಅಣೆಕಟ್ಟು ನಿರ್ಮಿಸುವ ಮೂಲಕ ಜನವಸತಿ, ಕೃಷಿ ಪ್ರದೇಶಗಳು ಮುಳುಗಡೆಯಾಗುವುದರಲ್ಲಿ ಸಂಶಯವಿಲ್ಲ. ಇದನ್ನೇ ಪಕ್ಷತೀತವಾಗಿ ನಾವೆಲ್ಲರೂ ಒಗ್ಗೂಡಿ ವಿರೋಧಿಸುತ್ತೇವೆ ಎಂದರು.ನಿವೃತ್ತ ಎಂಜಿನಿಯರ್ ವಿ.ಎಂ. ಭಟ್ಟ ಮಾತನಾಡಿ, ಜಿಲ್ಲೆಯ ಶಾಲ್ಮಲಾ ಹಾಗೂ ಬೇಡ್ತಿ ಹಾಗೂ ಅದನ್ನು ನಂಬಿ ಬದುಕುತ್ತಿರುವ ಕನಿಷ್ಠ 50ಕ್ಕೂ ಹೆಚ್ಚು ಹಳ್ಳಿಗಳನ್ನು ಸಾಯಿಸಲು ಸರ್ಕಾರ ಹೊರಟಿದೆ. ಬೇಡ್ತಿ ನದಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರು ಕೊಂಡೊಯ್ಯುವ ಯೋಜನೆಯೂ ವಿಫಲವಾಗಿದೆ. ಶಿರಸಿ, ಯಲ್ಲಾಪುರ ಭಾಗದಲ್ಲಿಯೇ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಇರುವಾಗ ಈ ಯೋಜನೆ ಅನುಷ್ಠಾನ ಮಾಡಲು ಹೊರಟಿರುವುದು ಎಷ್ಟು ಸರಿ? ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳ ಸಮಸ್ಯೆ ಪರಿಹಾರಕ್ಕೆ ಹಣ ನೀಡದ ಸರ್ಕಾರ ಅಲ್ಲೆಲ್ಲೋ ಸಾವಿರ ಕೋಟಿ ನೀಡಿ ನೀರು ಕೊಂಡೊಯ್ಯುವುದು ಸರಿಯೇ? ₹100 ಕೋಟಿ ನೀಡಿ ನಮ್ಮ ಜಿಲ್ಲೆಯ ನೀರಾವರಿ ಸಮಸ್ಯೆ ಪರಿಹರಿಸಲು ಆಸಕ್ತಿ ವಹಿಸಬೇಕು. ನಮ್ಮ ನದಿಗಳಿಗೆ ಮಿನಿ ಚೆಕ್ ಡ್ಯಾಮ್ ನಿರ್ಮಿಸಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಸಮಸ್ಯೆ ಬಗೆ ಹರಿಸಲು ಆದ್ಯತೆ ನೀಡಬೇಕು ಎಂದರು.ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕಲಣ್ಣನವರ್ ಇದ್ದರು.