ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಸಂಖ್ಯೆ-19ರಲ್ಲಿ ಅವ್ಯವಸ್ಥೆ ಹಾಗೂ ನಿಯಮ ಉಲ್ಲಂಸುತ್ತಿದ್ದು, ನ್ಯಾಯಬೆಲೆ ಅಂಗಡಿಯ ಆಹಾರ ವಿತರಕ ನರಸೇಗೌಡ ಪಡಿತರಕ್ಕಾಗಿ ಆಗಮಿಸುವುದರಿಂದ ಮುಂಚಿತವಾಗಿಯೇ ಬಯೋಮೆಟ್ರಿಕ್ ಪಡೆದುಕೊಂಡು ಬಳಿಕ ಆಹಾರ ಧಾನ್ಯ ವಿತರಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಯೋಮೆಟ್ರಿಕ್ ಪಡೆದ ಬಳಿಕವೂ ಪಡಿತರ ವಿತರಣೆಗೆ ವಿಳಂಬ ಮಾಡುತ್ತಿರುವ ಕುರಿತು ಸಾರ್ವಜನಿಕರು ಪ್ರಶ್ನಿಸಿದರೆ, ವಿತರಕರ ಕುಟುಂಬದ ಸದಸ್ಯರ ಮೂಲಕ ಪ್ರಶ್ನಿಸುವವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ದೂರು ನೀಡಲೂ ಹಿಂದೇಟು:ನ್ಯಾಯಬೆಲೆ ಅಂಗಡಿಯಲ್ಲಿನ ಸಮಸ್ಯೆಗಳ ಕುರಿತು ಹಲವು ಬಾರಿ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳುವ ಬದಲು ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ. ಇದೀಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಆಹಾರ ವಿತರಕ ಹಾಗೂ ಅವರ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಭೀತಿಯಿಂದ ಕೆಲ ಸಾರ್ವಜನಿಕರು ಇಲಾಖೆಗೆ ಅಧಿಕೃತ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸ್ಥಳೀಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ತಾಲೂಕು ಆಹಾರ ನಿರೀಕ್ಷಕ ಜೈಕುಮಾರ್ ಅವರು ಸೋಲದೇವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯ ಕಾರ್ಯವೈಖರಿ ಕುರಿತು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಬಯೋಮೆಟ್ರಿಕ್ ಪಡೆದು ಹಲವು ದಿನಗಳ ಬಳಿಕ ಪಡಿತರ ನೀಡಲಾಗುತ್ತಿದೆ ಹಾಗೂ ಈ ಬಗ್ಗೆ ಪ್ರಶ್ನಿಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಆಹಾರ ನಿರೀಕ್ಷಕ ಜೈಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.