ಬಂಟ್ವಾಳ/ಉಡುಪಿ : ಹಲವು ಅನುಮಾನಗಳಿಗೆ ಕಾರಣವಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ಅಪ್ರಾಪ್ತ ಬಾಲಕ ದಿಗಂತ್ ನಾಪತ್ತೆ ಪ್ರಕರಣ ಕೊನೆಗೂ ಶನಿವಾರ ಆತನ ಪತ್ತೆಯೊಂದಿಗೆ ಸುಖಾಂತ್ಯ ಕಂಡಿದೆ.
ಫೆ.25ರಂದು ಮನೆ ಸಮೀಪದ ರೈಲ್ವೆ ಹಳಿಯಿಂದ ನಿಗೂಢ ರೀತಿಯಲ್ಲಿ ದಿಗಂತ್ ನಾಪತ್ತೆಯಾಗಿದ್ದ, ಆ ಬಳಿಕ ಕಳೆದ 12 ದಿನಗಳಿಂದ ನಿರಂತರವಾಗಿ ಪೊಲೀಸ್ ಕಾರ್ಯಾಚರಣೆ ನಡೆದಿತ್ತು. ಇದೀಗ ಆತ ಪತ್ತೆಯಾಗಿದ್ದು, ಪೊಲೀಸ್ ಇಲಾಖೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಜಿಲ್ಲೆ ಬಿಟ್ಟು ಹೊರ ಜಿಲ್ಲೆಗೆ ದಿಗಂತ್ ಹೋಗಿರಬಹುದು ಎಂದು ಊಹಾಪೋಹಗಳು ಎಬ್ಬಿತ್ತಾದರೂ ಕರಾವಳಿ ಭಾಗದಲ್ಲಿಯೇ ಈತನ ಪತ್ತೆಯಾಗಿರುವುದು ಮತ್ತೆ ಅನುಮಾನಗಳಿಗೆ ಕಾರಣವಾಗಿದೆ.
ಉಡುಪಿಯ ಡಿಮಾರ್ಟ್ ಮಳಿಗೆಯಲ್ಲಿ ಖರೀದಿಗೆ ದಿಗಂತ್ ಬಂದಿದ್ದಾಗ ಆತನನ್ನು ನೋಡಿದ ವ್ಯಕ್ತಿಯೋರ್ವರು ಗುರುತು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಮನೆಯವರಿಗೆ ಆತ ಅಲ್ಲಿನ ವ್ಯಕ್ತಿಯೋರ್ವರ ಮೊಬೈಲ್ ಮೂಲಕ ಫೋನ್ ಕಾಲ್ ಕೂಡ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಉಡುಪಿ ಬಿಜೆಪಿ ಪ್ರಮುಖರೋರ್ವರ ಮಗನಿಗೆ ದಿಗಂತ್ ಕಾಣಸಿಕ್ಕಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರು ದ.ಕ. ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಬಳಿಕ ಪೊಲೀಸ್ ತಂಡಕ್ಕೆ ಹಾಗೂ ಹಿಂದೂ ಸಂಘಟನೆಯ ಪ್ರಮುಖರಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿಗಂತ್ ಪತ್ತೆಯಾದ ಉಡುಪಿಯ ಡಿಮಾರ್ಟ್‌ಗೆ ತೆರಳಿ ಅಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.
ಫರಂಗಿಪೇಟೆಯ ದಿಗಂತ್ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಸತತ ಕಾರ್ಯಾಚರಣೆ ಬಳಿಕ ದಿಗಂತ್‌ನನ್ನು ಪತ್ತೆ ಹಚ್ಚಿದ ಪೊಲೀಸರ ಮುಖದಲ್ಲಿಯೂ ಸಂತಸದ ಛಾಯೆ ಕಾಣಿಸಿದೆ.ತಾಯಿ ಜೊತೆ ಮಾತನಾಡಿದ ದಿಗಂತ್:
ನನಗೇನು ತೊಂದರೆಯಾಗಿಲ್ಲ ಎಂದು ಹೇಳಿದ್ದ ದಿಗಂತ್, ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ, ನಾನು ನಾಪತ್ತೆಯಾಗುವ ಹುಡುಗ ಅಲ್ಲ ಎಂದು ಹೇಳಿರುವ ಬಗ್ಗೆ ಆತನ ತಾಯಿ ಸುಜಾತಾ ಪದ್ಮನಾಭ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಎಲ್ಲವನ್ನೂ ನಾನು ಬಂದು ಹೇಳುತ್ತೇನೆ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.ಶರ್ಟ್ ಬದಲಿಸಿದ್ದ ದಿಗಂತ್:
ದಿಗಂತ್ ಕಾಣೆಯಾಗಿ 12 ದಿನ ಎಲ್ಲಿ ತಂಗಿದ್ದ, ಯಾರ ಜೊತೆ ಇದ್ದ ಎಂಬುದು ಇನ್ನೂ ನಿಗೂಢ. ಆದರೆ ಈತ ಮನೆಯಿಂದ ಹೋಗುವಾಗ ಹಾಕಿಕೊಂಡಿದ್ದ ಅಂಗಿಯನ್ನು ಬದಲಿಸಿ ಬೇರೆ ಅಂಗಿ ಹಾಕಿಕೊಂಡಿದ್ದಾನೆ. ಜೊತೆಗೆ ಹೊಸ ಚಪ್ಪಲಿ ಕೂಡ ಇದೆ. ಮನೆಯಿಂದ ಹೋಗುವಾಗ ಧರಿಸಿಕೊಂಡಿದ್ದ ಪ್ಯಾಂಟನ್ನು ಇವತ್ತು ಕೂಡ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅನಾಮಧೇಯ ನಂಬರ್‌ನಿಂದ ಕರೆ ಬಂತು:
ಶನಿವಾರ ಮಧ್ಯಾಹ್ನ 3.30ರ ಹೊತ್ತಿಗೆ ಒಂದು ಅನಾಮಧೇಯ ನಂಬರ್‌ನಿಂದ ಕರೆ ಬಂತು. ಆಗ ದಿಗಂತ್ ಉಡುಪಿ ಡಿಮಾರ್ಟ್‌ನಲ್ಲಿ ಇರೋದು ಗೊತ್ತಾಯ್ತು. ನಾನು ತಕ್ಷಣ ಬಂಟ್ವಾಳ ಪೊಲೀಸ್ ಎಸ್ಸೈ ನಂದ ಕುಮಾರ್ ಅವರಿಗೆ ಕರೆ ಮಾಡಿ ಹೇಳಿದೆ ಎಂದು ದಿಗಂತ್ ದೊಡ್ಡಪ್ಪನ ಮಗ ಪ್ರಣಾಮ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಪೊಲೀಸರು ತಕ್ಷಣ ಉಡುಪಿಗೆ ತೆರಳಿ ಅವನನ್ನು ಕರೆದುಕೊಂಡು ಬರ್ತಾಇದಾರೆ. ತಾಯಿಯ ಬಳಿ ನನ್ನನ್ನ ಯಾರೋ ಎತ್ತಾಕಿಕೊಂಡು ಹೋಗಿದ್ದಾಗಿ ಹೇಳಿದ್ದಾನೆ. ಅವನು ಹಾಗೆಲ್ಲ ಹೋಗುವ ಹುಡುಗ ಅಲ್ಲ, ಯಾರೋ ಕರೆದುಕೊಂಡು ಹೋಗಿರಬಹುದು ಎಂದು ತಿಳಿಸಿದ್ದಾರೆ.
ದಿಗಂತ್ ಮಾತನಾಡಿದ:ಮಾಧ್ಯಮಗಳ ಜೊತೆ ದಿಗಂತ್ ತಂದೆ ಪದ್ಮನಾಭ ಮಾತನಾಡಿ, ಮಧ್ಯಾನ್ಹ 3.30ಕ್ಕೆ ಪತ್ನಿಗೆ ಕರೆ ಬಂತು, ಆಗ ದಿಗಂತ್ ಮಾತನಾಡಿದ. ನಾವು ಎಲ್ಲಿಗೆ ಹೋಗಿದ್ದೆ ಅಂತಾ ಕೇಳಿದ್ವಿ, ನಾನು ಹೋಗಿದ್ದಲ್ಲ. ನನ್ನನ್ನು ಕರೆದುಕೊಂಡು ಹೋಗಿದ್ರು ಅಂತಾ ಹೇಳಿದ. ದಿಗಂತ್‌ಗೆ ಉಡುಪಿ ಪರಿಚಯ ಇಲ್ಲ, ಆತನ ಸ್ನೇಹಿತರು ಉಡುಪಿಯಲ್ಲಿ ಯಾರು ಇಲ್ಲ. ಆತ ಒಬ್ಬನೇ ಎಲ್ಲಿಗೂ ಹೋಗಲ್ಲ, ಇನ್ನು ಆತನನ್ನು ನಾವು ನೋಡಿಲ್ಲ ನೋಡಿದ ಮೇಲೆ ಸಮಾಧಾನ ಆಗುತ್ತೆ ಎಂದವರು ಪ್ರತಿಕ್ರಿಯಿಸಿದ್ದಾರೆ.