ಕಾಣೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಬಂಧನ

KannadaprabhaNewsNetwork |  
Published : Feb 16, 2026, 01:45 AM IST
15ಎಚ್ಎಸ್ಎನ್19 : ಕಾಣೆಯಾಗಿದ್ದ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಡೇವಿಡ್‌. | Kannada Prabha

ಸಾರಾಂಶ

ಬೇಲೂರು ತಾಲೂಕು ಬಿಕ್ಕೋಡು ಸಮೀಪದ ಹಳ್ಳಿಯೊಂದರ ಪ್ರಿಯಾಂಕ ಅವರನ್ನು ಕುಣಿಗಲ್‌ಗೆ ಮದುವೆ ಮಾಡಿಕೊಡಲಾಗಿತ್ತು. ಫೆ.12ರಂದು ಮದುವೆಗೆಂದು ಒಡವೆಗಳನ್ನೆಲ್ಲಾ ಹಾಕಿಕೊಂಡು ಬಂದಿದ್ದ ಪ್ರಿಯಾಂಕ 14ರಂದು ಕಾಣೆಯಾಗಿದ್ದರು. ಅವರ ಬಟ್ಟೆ, ಬ್ಯಾಗ್‌ ಹಗರೆ ಸಮೀಪದ ಕಲ್ಕೆರೆ ಬಳಿ ಪತ್ತೆಯಾಗಿತ್ತು. ಹಾಗಾಗಿ ಒಡವೆಗಳಿಗಾಗಿ ಯಾರೋ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿರಬಹುದೆಂದು ಆಕೆಯ ಕುಟುಂಬಸ್ಥರೆಲ್ಲಾ ಕಣ್ಣೀರು ಹಾಕಿದ್ದರು. ಪೊಲೀಸರು ವಿಳಂಬ ಮಾಡಿದ್ದಾರೆ ಎನ್ನುವ ಆರೋಪವನ್ನೂ ಮಾಡಿದ್ದರು. ಇದರಿಂದ ಪೊಲೀಸರು ಕೂಡ ತಲೆ ಕೆಡಿಸಿಕೊಳ್ಳುವಂತಾಗಿತ್ತು.

ಕನ್ನಡಪ್ರಭ ವಾರ್ತೆ ಹಾಸನ ಲಕ್ಷಾಂತರ ರುಪಾಯಿ ಮೌಲ್ಯದ ಒಡವೆ ಧರಿಸಿ ನಾಪತ್ತೆಯಾಗಿ ಇಡೀ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಮಹಿಳೆಯೀಗ ಪೊಲೀಸರ ಅತಿಥಿಯಾಗಿದ್ದಾಳೆ. ಅದೂ ಪ್ರಿಯಕರನ ಜತೆಗೆ....!ಯಾಕಮ್ಮಾ ಇಷ್ಟೆಲ್ಲಾ ಡ್ರಾಮಾ ಮಾಡಿದೆ ಅಂತಾ ಕೇಳಿದ ಪೊಲೀಸರಿಗೂ ಒಂದು ಕ್ಷಣ ಪಿತ್ತ ನೆತ್ತಿಗೇರುವಂತ ಉತ್ತರ ಸಿಕ್ಕಿತ್ತು. ಏನೆಂದರೆ.....ನನಗೆ ನನ್ನ ಗಂಡ ಇಷ್ಟವಿರಲಿಲ್ಲ. ಗಂಡನ ಸ್ನೇಹಿತ ಇಷ್ಟ. ಹಾಗಾಗಿ ಅವನೊಂದಿಗೆ ಓಡಿಹೋಗಲು ಇಷ್ಟೆಲ್ಲಾ ನಾಟಕ ಮಾಡಿದೆ ಎಂದು ಹೇಳಿದ್ದಾಳೆ. ಬೇಲೂರು ತಾಲೂಕು ಬಿಕ್ಕೋಡು ಸಮೀಪದ ಹಳ್ಳಿಯೊಂದರ ಪ್ರಿಯಾಂಕ ಅವರನ್ನು ಕುಣಿಗಲ್‌ಗೆ ಮದುವೆ ಮಾಡಿಕೊಡಲಾಗಿತ್ತು. ಫೆ.12ರಂದು ಮದುವೆಗೆಂದು ಒಡವೆಗಳನ್ನೆಲ್ಲಾ ಹಾಕಿಕೊಂಡು ಬಂದಿದ್ದ ಪ್ರಿಯಾಂಕ 14ರಂದು ಕಾಣೆಯಾಗಿದ್ದರು. ಅವರ ಬಟ್ಟೆ, ಬ್ಯಾಗ್‌ ಹಗರೆ ಸಮೀಪದ ಕಲ್ಕೆರೆ ಬಳಿ ಪತ್ತೆಯಾಗಿತ್ತು. ಹಾಗಾಗಿ ಒಡವೆಗಳಿಗಾಗಿ ಯಾರೋ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿರಬಹುದೆಂದು ಆಕೆಯ ಕುಟುಂಬಸ್ಥರೆಲ್ಲಾ ಕಣ್ಣೀರು ಹಾಕಿದ್ದರು. ಪೊಲೀಸರು ವಿಳಂಬ ಮಾಡಿದ್ದಾರೆ ಎನ್ನುವ ಆರೋಪವನ್ನೂ ಮಾಡಿದ್ದರು. ಇದರಿಂದ ಪೊಲೀಸರು ಕೂಡ ತಲೆ ಕೆಡಿಸಿಕೊಳ್ಳುವಂತಾಗಿತ್ತು.ಪ್ರಿಯಕರನ ಮನೆಯಲ್ಲೇ ಇದ್ದಳು:ಕೆರೆ ಪಕ್ಕ ಸಿಕ್ಕ ಆಕೆಯ ವಸ್ತುಗಳನ್ನು ಕಂಡ ಪೊಲೀಸರು ಮೊದಲಿಗೆ ಕೆರೆಯಲ್ಲಿ ಶವ ಇರಬಹುದೆಂದು ಮಲ್ಪೆ ಈಶ್ವರ್‌ ತಂಡವನ್ನು ಕರೆಸಿ ಇಡೀ ಕೆರೆಯನ್ನೆಲ್ಲಾ ಜಾಲಾಡಿದ್ದರು. ಸಾಲದ್ದಕ್ಕೆ ಡ್ರೋಣ್‌ ಕ್ಯಾಮರಾ ಮೂಲಕ ಆಸುಪಾಸಿನ ಪ್ರದೇಶದಲ್ಲೆಲ್ಲಾ ಹುಡುಕಾಟ ನಡೆಸಿದ್ದರು. ಆದರೆ, ಈಶ್ವರ್‌ ಮಲ್ಪೆ ತಂಡ ಕೆರೆಯಲ್ಲಿ ಶವ ಇಲ್ಲವೆಂದು ದೃಢಪಡಿಸಿದ ನಂತರ ಪೊಲೀಸರು ಬೇರೆಯದ್ದೇ ಮಾರ್ಗದಲ್ಲಿ ತನಿಖೆ ಮುಂದುವರೆಸಿದಾಗ ಇಡೀ ಹೈಡ್ರಾಮಾದ ಸೂತ್ರಧಾರಿ ಪ್ರಿಯಾಂಕ ಕುಣಿಗಲ್‌ನ ತನ್ನ ಪ್ರಿಯಕರನ ಮನೆಯಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಫೆ.13ರ ರಾತ್ರಿ ಪ್ರಿಯಾಂಕ ತನ್ನ ಅಮ್ಮ ಹಾಗೂ ಚಿಕ್ಕಮ್ಮನಿಗೆ ಫೋನ್‌ ಮಾಡಿ ತನಿಗೆ ಪರಿಚಯಸ್ಥರೊಬ್ಬರು ಸಿಕ್ಕಿದ್ದು, ತಾನು ಕುಣಿಗಲ್‌ಗೆ ಹೊರಟಿದ್ದೇನೆ ಎಂದು ತಿಳಿಸಿದ್ದಳು. ಆ ನಂತರದಲ್ಲಿ ಆಕೆಯ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಗಾಬರಿಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಫೆ.14ರಂದು ಕಲ್ಕೆರೆ ಬಳಿ ವ್ಯಾನಿಟಿ ಬ್ಯಾಗ್‌, ಚಪ್ಪಲಿ ಹಾಗೂ ಬಟ್ಟೆ ಸಿಕ್ಕಿದ್ದವು. ಈ ಆಧಾರದ ಮೇಲೆ ಕೆರೆಯನ್ನು ಜಾಲಾಡಿದ ನಂತರವೂ ಏನೂ ಸಿಗದಿದ್ದಾಗ ತಮ್ಮ ಪೊಲೀಸ್‌ ಬುದ್ಧಿ ಉಪಯೋಗಿಸಿ ಕೆಲ ಸಿಸಿ ಕ್ಯಾಮೆರಾಗಳ ಫೂಟೇಜ್‌ ಹಾಗೂ ಪ್ರಿಯಾಂಕಳ ಮೊಬೈಲ್‌ ಹಿಸ್ಟರಿ ತೆಗೆದಾಗಲೇ ಅದೊಂದು ನಂಬರ್‌ ಜತೆ ಹೆಚ್ಚಿನ ಕಾಲ್‌ ಹಾಗೂ ಚಾಟ್‌ ನಡೆದಿತ್ತು. ಆ ನಂಬರಿನ ಹಿಡಿದು ಜಾಲಾಡಿದಾಗ ಅದು ಕುಣಿಗಲ್‌ನ ಡೇವಿಡ್‌ ಎಂಬುವವನಾಗಿತ್ತು. ಈ ಡೇವಿಡ್‌ ಮೂಲತಃ ಬಿಹಾರದವನು ಎಂದು ಹೇಳಲಾಗುತ್ತಿದ್ದು, ಇವನು ಇದೇ ಪ್ರಿಯಾಂಕಳ ಪತಿಯ ಸ್ನೇಹಿತನೇ ಆಗಿದ್ದನು. ಕುಣಿಗಲ್‌ನ ಕಾರ್ಖಾನೆಯೊಂದರಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದನು. ಪ್ರಿಯಾಂಕಳು ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯ ಚೆನ್ನಾಗೇ ಇತ್ತು. ಪರಿಚಯ ಪ್ರೀತಿಗೂ ತಿರುಗಿತ್ತು. ಹಾಗಾಗಿ ಪ್ರಿಯಾಂಕಗೆ ತನ್ನ ಗಂಡನೇ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಪ್ರಿಯಾಂಕ ಹಾಗೂ ಡೇವಿಡ್‌ ಹೊರರಾಜ್ಯಕ್ಕೆ ಓಡಿಹೋಗಿ ಎಲ್ಲಿ ಹೊಸ ಜೀವನ ಶುರುಮಾಡಲಿಕ್ಕಾಗಿ ಇಷ್ಟೆಲ್ಲಾ ಕಥೆ ಕಟ್ಟಿದ್ದರು. ಆರಂಭದಲ್ಲಿ ಗಂಭೀರ ಸ್ವರೂಪ ಪಡೆದಿದ್ದ ಈ ಪ್ರಕರಣ, ಪೊಲೀಸರ ತ್ವರಿತ ಹಾಗೂ ತಾಂತ್ರಿಕ ತನಿಖೆಯಿಂದ ಸುಗಮವಾಗಿ ಬಗೆಹರಿದಿದೆ. ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಶುಭನ್ವಿತಾ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡಸಿಯಲ್ಲಿ ಶಾಸಕ ಶಿವಲಿಂಗೇಗೌಡರ ಹುಟ್ಟುಹಬ್ಬ ಆಚರಣೆ
ರಾಜ್ಯ ಸರ್ಕಾರದ ಲಂಚಗುಳಿತನದಿಂದ ರೈತರ ಬದುಕು ಶೋಷಣೆ: ಗುರುಪ್ರಸಾದ್‌