ಕನ್ನಡಪ್ರಭ ವಾರ್ತೆ ತುಮಕೂರು
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆಯಿಂದ ಸೋಮವಾರ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಹಾಗೂ ‘ಸಂವಿಧಾನ ಬದಲಾಯಿಸಿದ್ದು ಯಾರು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನದ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದರು. ಸಂವಿಧಾನವನ್ನು ಯಾರು ಎಷ್ಟು ಬಾರಿ ತಿದ್ದುಪಡಿ ಮಾಡಿದರು, ಏತಕ್ಕಾಗಿ ಮಾಡಿದರು ಎಂಬುದು ಮುಖ್ಯ ಎಂದರು.ಇದೂವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ 50 ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 75 ಬಾರಿ, ವಾಜಪೇಯಿ ಪ್ರಧಾನಿಯಾಗಿದ್ದಾಗ 14 ಬಾರಿ, ನರೇಂದ್ರ ಮೋದಿಯವರು ಪ್ರಧಾನಿಯಾಗಿ 8 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದರು.
ಎಸ್.ಸಿ, ಎಸ್.ಟಿ ನೌಕರರು, ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಲಾಗುವುದಿಲ್ಲ ಎಂಬ ಕೋರ್ಟ್ ಆದೇಶ ಬಂದಾಗ ಪ್ರಧಾನಿ ವಾಜಪೇಯಿ ಆಡಳಿತದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಸಮುದಾಯಗಳಿಗೆ ಅನುಕೂಲ ಮಾಡಲಾಯಿತು. 170 ವಿಧಿ ಅನುಷ್ಠಾನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪರಿಶಿಷ್ಟಜಾತಿ, ವರ್ಗಗಳಿಗೆ ಮೀಸಲಾತಿ, ಸೇರಿದಂತೆ ಯಾವುದೇ ಸಂವಿಧಾನಾತ್ಮಕ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತಂದು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 170 ವಿಧಿಯನ್ನು ರದ್ದು ಮಾಡಲಾಯಿತು ಎಂದರು.
ಸಂವಿಧಾನಕ್ಕೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿಕೊಂಡು ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರ ಅನುಭವಿಸಿದ ಕಾಂಗ್ರೆಸ್‌ನವರ ಮುಖವಾಡ ಕಳಚಿದ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್‌ನವರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ರಾಷ್ಟ್ರ ಸಂವಿಧಾನ ಜಾರಿಗೆ ತರಲಾಗುತ್ತಿದೆ ಎಂಬ ವಿಚಾರಗಳು ಹರಿದಾಡುತ್ತಿವೆ. ಇದು ಅಪ್ಪಟ ಸುಳ್ಳು ಸುದ್ದಿ. ಅಂಬೇಡ್ಕರ್ ಅವರ ಸಂವಿಧಾನ ಬಿಟ್ಟು ಇನ್ನೊಂದು ಸಂವಿಧಾನ ಈ ದೇಶದಲ್ಲಿ ಬರಲು ಸಾಧ್ಯವಿಲ್ಲ, ನಾವ್ಯಾರೂ ಒಪ್ಪುವುದಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಕಾಂಗ್ರೆಸ್‌ನಿಂದ ದಲಿತರ ಏಳಿಗೆ ಸಾಧ್ಯವಿಲ್ಲ, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್, ಮಹದೇವಪ್ಪನಂತಹವರು ಮಾತ್ರ ಉದ್ಧಾರ ಆಗ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರು ಪಕ್ಷದ ಕೇವಲ ಪದಾಧಿಕಾರಿಯಷ್ಟೇ, ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ. ಕೇವಲ ದುಡಿಸಿಕೊಳ್ಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಆತ್ಮವಂಚನೆ ಮಾಡಿಕೊಳ್ಳದೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅವಮಾನದ ಬಗ್ಗೆ ಸತ್ಯ ಹೇಳಲಿ ಎಂದರು.
ಇದಕ್ಕೂ ಮೊದಲು ನಗರದ ಬಿಜಿಎಸ್ ವೃತ್ತದಿಂದ ಮಂಗಳ ವಾದ್ಯಗಳೊಂದಿಗೆ ಅಲಂಕೃತ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಗ್ರಂಥದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.