ಪೊಲೀಸರಿಂದ ಕೋಟ್ಯಂತರ ರು. ದುರ್ಬಳಕೆ!

KannadaprabhaNewsNetwork |  
Published : Jul 21, 2026, 01:30 AM IST
20ಕೆಡಿವಿಜಿ8-ದಾವಣಗೆರೆಯಲ್ಲಿ ಸೋಮವಾರ ಕೆಸಿ ಟ್ರೇಡರ್ಸ್ ಮಾಲೀಕ ಎಂ.ಶಿವಲಿಂಗಯ್ಯ ಗಡಿಗುಡಾಳ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಿಂದ ₹4ರಿಂದ ₹4.70 ಕೋಟಿ ವಸೂಲಿ ಮಾಡಿ, ನ್ಯಾಯಾಲಯಕ್ಕೆ ಕೇವಲ ₹2.68 ಕೋಟಿ ತೋರಿಸಿ, ಹೆಚ್ಚುವರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಪನಹಳ್ಳಿ ತಾ. ಗಡಿಗುಡಾಳ ಗ್ರಾಮದ ವಾಸಿ, ಕೆ.ಸಿ. ಟ್ರೇಡರ್ಸ್ ಮಾಲೀಕ ಎಂ.ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.

- ₹4 ಕೋಟಿಗೂ ಅಧಿಕ ಹಣ ಜಪ್ತಿ, ₹2.68 ಕೋಟಿ ಕೋರ್ಟ್‌ಗೆ ಲೆಕ್ಕ: ಶಿವಲಿಂಗಯ್ಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಿಂದ ₹4ರಿಂದ ₹4.70 ಕೋಟಿ ವಸೂಲಿ ಮಾಡಿ, ನ್ಯಾಯಾಲಯಕ್ಕೆ ಕೇವಲ ₹2.68 ಕೋಟಿ ತೋರಿಸಿ, ಹೆಚ್ಚುವರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಪನಹಳ್ಳಿ ತಾ. ಗಡಿಗುಡಾಳ ಗ್ರಾಮದ ವಾಸಿ, ಕೆ.ಸಿ. ಟ್ರೇಡರ್ಸ್ ಮಾಲೀಕ ಎಂ.ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ನೇ ಸಾಲಿನ ವಂಚನೆ ಪ್ರಕರಣದ ತನಿಖೆಯಲ್ಲಿ ದಾವಣಗೆರೆ ಜಿಲ್ಲೆಯ ಪೊಲೀಸರು ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ, ಕೋಟ್ಯಂತರ ರು. ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಜೊತೆಗೆ ರೈತರಿಗೆ ಬರಬೇಕಾದ ಹಣ‍ವನ್ನು ಮರಳಿಕೊಡಿಸಬೇಕು ಎಂದರು.

ತಮ್ಮ ಒಡೆತನದ ಕೆಸಿ ಟ್ರೇಡರ್ಸ್ ಬ್ಯಾಂಕ್ ಖಾತೆ ದಾವಣಗೆರೆ ಪಿ.ಬಿ. ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿತ್ತು. ಅಲ್ಲಿನ ಅಧಿಕಾರಿ, ಸಿಬ್ಬಂದಿ ಹಾಗೂ ತನ್ನ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಸೇರಿಕೊಂಡು, ನನ್ನ ಗಮನಕ್ಕೆ ಬಾರದಂತೆ ಚೆಕ್ ಮೂಲಕ ಹಣ ಬಿಡಿಸಿಕೊಂಡಿದ್ದರು. ಈ ಬಗ್ಗೆ ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನಂತರ ಆರೋಪಿಗಳು ಸಿಕ್ಕಿಬಿದ್ದು, ಸುಮಾರು ₹4ರಿಂದ ₹4.70 ಕೋಟಿವರೆಗೆ ಪೊಲೀಸರು ಹಣ ವಶಪಡಿಸಿಕೊಂಡಿದ್ದರು. ಆದರೆ, ನನಗೆ ಮೆಕ್ಕೆಜೋಳ ಮಾರಿದ ರೈತರಿಗೆ ಆ ಹಣವನ್ನು ಕೊಡಲಿಲ್ಲ ಎಂದು ದೂರಿದರು.

ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಸಲ ಕೇಳಿದರೂ ನನಗೆ ಯಾವುದೇ ಮಾಹಿತಿ ನೀಡದೇ, ದಬಾಯಿಸಿ, ಕಳಿಸುತ್ತಿದ್ದರು. ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ವಂಚನೆ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಸಿಐಡಿಗೆ ವಹಿಸುವಂತೆ 3ನೇ ಹೆಚ್ಚುವರಿ ನ್ಯಾಯಾಲಯವು 26.9.2023ರಂದು ಆದೇಶಿಸಿತ್ತು. ಆದರೆ, ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸದೇ, ಪ್ರಕರಣವನ್ನು ಕಾನೂನು ಬಾಹಿರವಾಗಿ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸಿ, ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದರು ಎಂದು ಅವರು ಆರೋಪಿಸಿದರು.

ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಆರೋಪಿಗಳಿಂದ ಒಟ್ಟು ₹4ರಿಂದ ₹4.70 ಕೋಟಿವರೆಗೆ ಪೊಲೀಸರು ವಸೂಲು ಮಾಡಿದ್ದರು. ಆದರೆ, ನ್ಯಾಯಾಲಯಕ್ಕೆ ₹2.68 ಕೋಟಿಗಳನ್ನು ಮಾತ್ರ ತೋರಿಸಿ, ಬಾಕಿ ಉಳಿದ ಹಣವನ್ನು ಪೊಲೀಸರೇ ದುರುಪಯೋಗಪಡಿಸಿಕೊಂಡಿದ್ದಾರೆ. ಇದೂ 2026ರಲ್ಲಿ ಸಿಇಎನ್ ಠಾಣೆ ಡಿವೈಎಸ್ಪಿ ಜೊತೆಗೆ ಸಂಭಾ‍ಷಣೆ ವೇಳೆ ತಮ್ಮ ಗಮನಕ್ಕೆ ಬಂದಿದೆ. ಸಕಾರಣಗಳಿಲ್ಲದೇ, ತನಿಖೆಯನ್ನೇ ವರ್ಷಗಟ್ಟಲೇ ವಿಳಂಬ ಮಾಡಿ, ಸುಾಮರು 160ರಿಂದ 200 ಅಮಾಯಕ ರೈತರು, ಮತ್ತವರ ಕುಟುಂಬಗಳಿಗೆ ಘೋರ ಅನ್ಯಾಯ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ತನಿಖೆ ವಿಳಂಬ ಧೋರಣೆಯಿಂದ ರೋಸಿ ಹೋಗಿದ್ದ ತಾವು ಎಸ್‌ಪಿ ಕಚೇರಿಯ ಆವರಣದಲ್ಲೇ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆಗಿನ ಎಸ್‌ಪಿ ಉಮಾ ಪ್ರಶಾಂತ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ನ್ಯಾಯ ಸಿಗಲಿಲ್ಲ. ತಮ್ಮ ದೂರಿಗೆ ಸಂಬಂಧಿಸಿದಂತೆ ಒಟ್ಟು 52 ವಂಚನೆ ದೂರುಗಳು ಹಾಗೂ 641 ಪುಟಗಳ ದಾಖಲೆಗಳನ್ನ ಲಗತ್ತಿಸಿದ್ದು, ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ನೊಂದರ ರೈತರಿಗೆ ನ್ಯಾಯ ಕೊಡಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗಯ್ಯ ಒತ್ತಾಯಿಸಿದರು.

ಶಿವಲಿಂಗಯ್ಯ ಪತ್ನಿ ಶ್ವೇತಾ, ಅಕ್ಕ ಯಶೋಧ, ರೈತರಾದ ಮಾದೇನಹಳ್ಳಿ ಬೊಮ್ಮಲಿಂಗಪ್ಪ, ಮಾದೇಹಳ್ಳಿ ವೀರಭದ್ರಪ್ಪ, ಮಾದೇನಹಳ್ಳಿ ಬದರೇಶ, ಅಣಜಿಗೆರೆ ರಾಜಪ್ಪ, ಬಸವರಾಜಪ್ಪ ಅಣಜಿಗೇರೆ, ವೆಂಕಟೇಶ ಪಾಟೀಲ, ಬೂದಿಹಾಳ ಲೋಕೇಶ, ಅಣಜಿಗೆರೆ ಉಮೇಶ ಪಾಟೀಲ, ಅಸಗೋಡು ಗುಡದಯ್ಯ, ವೀರೇಶ ಮಾದೇನಹಳ್ಳಿ ಇತರರು ಇದ್ದರು.

- - -

(ಬಾಕ್ಸ್‌)

* 23ರಂದು ಪಾದಯಾತ್ರೆ, ಡಿಸಿ, ಐಜಿ, ಎಸ್‌ಪಿಗೆ ಮನವಿ ನನಗೆ ಹಾಗೂ ರೈತರಿಗೆ ನ್ಯಾಯ, ಬರಬೇಕಾದ ಹಣವನ್ನು ವಾಪಾಸ್ಸು ಕೊಡಿಸುವಂತೆ ಒತ್ತಾಯಿಸಿ ದಾವಣಗೆರೆ ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜು.24ರಂದು ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಅಲ್ಲದೇ, ಅಲ್ಲಿಂದ ಪೂರ್ವ ವಲಯದ ಐಜಿಪಿ ಕಚೇರಿಗೆ ತೆರಳಿ, ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಅರ್ಪಿಸಲಾಗುವುದು. ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗುತ್ತೇವೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದೂ ಶಿವಲಿಂಗಯ್ಯ ಗಡಿಗುಡಾಳ್ ಎಚ್ಚರಿಕೆ ನೀಡಿದರು.

- - -

-20ಕೆಡಿವಿಜಿ8; ದಾವಣಗೆರೆಯಲ್ಲಿ ಸೋಮವಾರ ಕೆಸಿ ಟ್ರೇಡರ್ಸ್ ಮಾಲೀಕ ಎಂ.ಶಿವಲಿಂಗಯ್ಯ ಗಡಿಗುಡಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ: ಶಾಸಕ ಗಣೇಶ್ ಸಲಹೆ
28ರಂದು ನಗರದಲ್ಲಿ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ