ಗಂಗಾವತಿ: ತಾಲೂಕಿನ ಸಾಣಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲಾ ಅವರು ಸರ್ಕಾರಿ ಅನುದಾನ ದುರುಪಯೋಗ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಬೆಟ್ಟಪ್ಪ ಹನುಮಂತಪ್ಪ ಅವರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.
ಸರ್ಕಾರದ ಅರಣ್ಯ ಇಲಾಖೆಗೆ ಸಂಬಂಧಿಸಿದ ಭೂಮಿಯಲ್ಲಿ ಸಾರ್ವಜನಿಕ ವಸತಿ ಉದ್ದೇಶಕ್ಕೆ ಇ-ಸ್ವತ್ತು 11 /ಬಿ ವಿತರಿಸಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದ್ದು, ಅರಣ್ಯ ವ್ಯಾಪ್ತಿಗೆ ಸಂಬಂಧಿಸಿದ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಯಾವ ದಾಖಲೆ ಹಾಗೂ ಕಾನೂನು ಆಧಾರ ಬಳಸಲಾಗಿದೆ ಎಂಬುದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ದೂರು ನೀಡಿದ ನಾಲ್ಕು ಕುಟುಂಬಗಳಿಗೆ ಕಾನೂನುಬಾಹಿರವಾಗಿ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಟ್ಟಡಗಳ ಪರವಾನಗಿ, ಇ-ಸ್ವತ್ತು ದಾಖಲೆಗಳು ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅನುಮತಿಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಪಂ ಸ್ವಂತ ಸಂಪನ್ಮೂಲಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು, ನರೇಗಾ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದ್ದು, 2021ರಿಂದ 2026ರ ವರೆಗೆ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಅಂದಾಜು ಮೊತ್ತ, ಆಡಳಿತಾತ್ಮಕ ಅನುಮೋದನೆ, ವೆಚ್ಚದ ವಿವರ, ಬಿಲ್ ಪಾವತಿ, ಅಳತೆ ಪುಸ್ತಕ ಹಾಗೂ ಕಾಮಗಾರಿಗಳ ವಾಸ್ತವಿಕ ಸ್ಥಿತಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.ಕೂಡಲೆ ಜಿಪಂ ಮತ್ತು ತಾಪಂ ಅಧಿಕಾರಿಗಳು ತನಿಖೆ ನಡೆಸಬೇಕು ಮತ್ತು ತನಿಖೆ ನಡೆಯುವವರಿಗೂ ಪಿಡಿಒ ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಸಾಣಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲಾ ಅವರು ಅನುದಾನ ದುರಪಯೋಗ ಮಾಡಿದ ಕುರಿತು ದೂರು ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಲು ತಂಡ ಕಳುಹಿಸಿಕೊಡಲಾಗುತ್ತದೆ. ತನಿಖೆ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಂಗಾವತಿ ತಾಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.