ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಬಳಕೆಯಿಂದಾಗಿ ಜಗತ್ತು ತುಂಬಾ ಹತ್ತಿರವಾಗಿದ್ದು, ಯಾವುದೇ ಮೂಲೆಯಲ್ಲಿ ನಡೆಯುವ ವಿದ್ಯಮಾನಗಳು ಕ್ಷಣ ಮಾತ್ರದಲ್ಲಿ ತಿಳಿಯುತ್ತವೆ. ಆದರೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಸದ್ಬಳಕೆಗಿಂತ ದುರ್ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ನಗರದ ಚಂದ್ರವಳ್ಳಿಯ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಸಿಸಿ ಮತ್ತು ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾಂತ್ರಿಕ ಜೀವನ ಸಾಗಿಸುತ್ತಿದ್ದಾರೆ. ಗುಟ್ಕಾ, ಸಿಗರೇಟು, ಮದ್ಯಪಾನ, ಡ್ರಗ್ಸ್ ನಂತಹ ಹಲವಾರು ದುಶ್ಚಟಗಳಿಗೆ ದಾಸರಾಗಿ ಬಲಿಯಾಗುತ್ತಿದ್ದಾರೆ. ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಸನ್ಮಾರ್ಗಗಳು ಉತ್ತಮ ಜೀವನವನ್ನು ರೂಪಿಸುತ್ತವೆ. ನಮ್ಮ ಎಸ್‌ಜೆಎಂ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿರುವುದನ್ನು ಸ್ಮರಿಸಿದರು.ದಾವಣಗೆರೆ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ.ಬಿ ರಂಗಪ್ಪ ಮಾತನಾಡಿ, ಪ್ರಸ್ತುತ ಜನರು ಸ್ಥಳೀಯ ಅಂಗಡಿ ಮುಂಗಟ್ಟುಗಳನ್ನು ಬಿಟ್ಟು ಒಂದೇ ಸೂರಿನಡಿ ಎಲ್ಲಾ ವಸ್ತುಗಳು ಸಿಗುವ ದೊಡ್ಡ ದೊಡ್ಡ ಮಾಲ್‍ಗಳತ್ತ ಧಾವಿಸುತ್ತಿದ್ದಾರೆ. ಇದರ ಪರಿಣಾಮ ಸಣ್ಣಪುಟ್ಟ ವ್ಯಾಪಾರಗಳಿಗೆ ಹೊಡೆತ ಬಿದ್ದಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಕಲಿಕೆಯ ನಂತರ ಜವಾಬ್ದಾರಿಯುತ ಉದ್ಯೋಗಗಳಿಗೆ ಪ್ರಯತ್ನಿಸಿ ಮುಂದಿನ ಜೀವನ ರೂಪಿಸಿಕೊಳ್ಳಬೇಕಿದೆ. ಹಿಂದೆ ನಮ್ಮಗಳ ಕಾಲಾವಧಿಯಲ್ಲಿ ಉದ್ಯೋಗಗಳನ್ನು ನಾವು ಗಳಿಸಿದ ಅಂಕಗಳ ಆಧಾರದ ಮೇಲೆ ನೀಡುತ್ತಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಪದವಿಯೊಂದಿಗೆ ವಿವಿಧ ಕೌಶಲ್ಯಗಳ ಅಳವಡಿಸಿಕೊಂಡಲ್ಲಿ ಮಾತ್ರ ಉದ್ಯೋಗಗಳು ಪಡೆಯಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಶೇಷ ಕೌಶಲ್ಯಗಳ ಮೂಲಕ ಹಣವನ್ನು ಗಳಿಸಬಹುದು. ಪ್ರಸ್ತುತ ಉದ್ಯೋಗಾವಕಾಶಗಳ ಕೊರತೆ ಇರುವುದರಿಂದ ತಮ್ಮಲ್ಲಿರುವ ವಿಶೇಷ ಕೌಶಲ್ಯಗಳನ್ನು ಬಳಸಿಕೊಂಡು ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ ಎಂದು ಕಿವಿಮಾತು ಹೇಳಿದರು.ಪ್ರಾಚಾರ್ಯ ಡಾ.ಎಸ್.ಎಚ್ ಪಂಚಾಕ್ಷರಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ.ಹರ್ಷವರ್ಧನ್ ಎ. ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿ ಪಡೆದ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಸ್. ಆನಂದ್, 2024ನೇ ಅಂತಿಮ ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಲೀಲಾ ಮತ್ತು ಉಜ್ಮಾ ಮರಿಯಂ (ಬಿಎ), ತೇಜಸ್ವಿನಿ ವಿ.(ಬಿಎಸ್ಸಿ),ಮಹಾಲಕ್ಷ್ಮಿ ಟಿ. (ಬಿ.ಕಾಂ), ಎನ್.ಸಿಸಿ ವಿದ್ಯಾರ್ಥಿನಿ ಭಾವನಾ ಆರ್ ಇವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕರಾದ ಡಾ.ಬಿ. ರೇವಣ್ಣ, ಪ್ರೊ.ಸಿ. ತಿಪ್ಪೇಸ್ವಾಮಿ, ಪ್ರೊ. ಟಿ. ರಜಪೂತ್, ಪ್ರೊ. ಸಿ.ಎನ್. ವೆಂಕಟೇಶ್, ಪ್ರೊ.ಬಿ.ಎಂ. ಸ್ವಾಮಿ, ಡಾ. ನಾಜೀರುನ್ನೀಸಾ ಎಸ್., ಪ್ರೊ. ರಮೇಶ್ ಸಿ., ಡಾ. ಸತೀಶ್ ನಾಯ್ಕ್, ಪ್ರೊ. ಎಚ್.ಎಂ. ಮಂಜುನಾಥಸ್ವಾಮಿ, ಅಧೀಕ್ಷಕ ಶ್ರೀನಿವಾಸಮೂರ್ತಿ ಇದ್ದರು. ಚಿನ್ಮಯಿ ಭರತನಾಟ್ಯ ಪ್ರದರ್ಶನ ನೀಡಿದರು. ದಿವ್ಯಾ ಪ್ರಾರ್ಥಿಸಿದರು. ಡಾ.ಬಿ ರೇವಣ್ಣ ವಂದಿಸಿದರು.-----------------ಚಿತ್ರದುರ್ಗದ ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಸಿಸಿ ಮತ್ತು ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.- 23ಸಿಟಿಡಿ 4