ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ರೈತ ದೇಶದ ಬೆನ್ನುಲುಬು ಅದೇ ರೀತಿ ಕಾರ್ಮಿಕನೂ ಸಹ ದೇಶದ ಬೆನ್ನೆಲುಬಾಗಿದ್ದಾನೆ. ರೈತ ತನ್ನ ಪಾಲಿನ ಕೆಲಸ ಮಾಡದಿದ್ದರೆ ಜನರಿಗೆ ಅನ್ನ ಸಿಗವುದಿಲ್ಲ. ಅದೇ ರೀತಿ ಕಾರ್ಮಿಕ ತನ್ನ ಪಾಲಿನ ಕೆಲಸ ಮಾಡದಿದ್ದರೆ ಜನರಿಗೆ ಬೇರೆ ರೀತಿಯ ಕೆಲಸಗಳು ಆಗುವುದಿಲ್ಲ. ದೇಶದ ಆರ್ಥಿಕತೆಯನ್ನು ಅಯಾ ದೇಶದ ಕಾರ್ಮಿಕರ ಸಂಖ್ಯೆಯನ್ನು ಪರಿಗಣಿಸಿ ನಿರ್ಧಾರ ಮಾಡಲಾಗುತ್ತದೆ. ಇದರಿಂದಲೇ ಜಿಡಿಪಿಯನ್ನು ಸಹ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾರ್ಮಿಕರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ.
ಇದನ್ನು ತಿಳಿದ ಕೆಲವರು ಕಾರ್ಮಿಕ ಇಲಾಖೆಯಲ್ಲಿ ನಕಲಿ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರದ ಸೌಲಭ್ಯವನ್ನು ಪಡೆದು ಅರ್ಹರಿಗೆ ವಂಚನೆ ಮಾಡಲಾಗುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಅಂತಹ ನಕಲಿ ಕಾರ್ಡ್‌ದಾರರನ್ನು ಪತ್ತೆ ಮಾಡಿ ಅವರಿಂದ ಕಾರ್ಡ್‌ಗಳನ್ನು ಮರಳಿ ಇಲಾಖೆಗೆ ಕೊಡಿಸುವ ಕಾರ್ಯವನ್ನು ಮಾಡಬೇಕಿದೆ. ಈ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಸಹ ಮಾಡುತ್ತಿದ್ದು ಅವರ ಜೊತೆಗೆ ನೀವುಗಳೂ ಸಹ ಕೈ ಜೋಡಿಸಿ ಎಂದು ಹೇಳಿದರು.ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಹಮ್ಮದ್ ಸೈಯದ್ ಚೋಟು ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್ ಅವರು ಕಾರ್ಮಿಕರ ಕಷ್ಟಗಳನ್ನು ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದ್ದಾರೆ. ನಮ್ಮ ಕಾರ್ಮಿಕ ವಿಭಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಸಮಾವೇಶವನ್ನು ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗುವುದು. ಹಿಂದಿನ ಸರ್ಕಾರ ಕಾರ್ಮಿಕರಿಗೆ ತುಂಬಾ ಅನ್ಯಾಯವನ್ನು ಮಾಡಿದ್ದು ಅದನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಕಾರ್ಮಿಕರಿಗೆ ಸರ್ಕಾರ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯವನ್ನು ನೀಡುವಂತಾಗಬೇಕಿದೆ ಎಂದು ಹೇಳಿದರು.ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಜಾಕಿರ್ ಹುಸೇನ್ ಮಾತನಾಡಿ, ಕಾರ್ಮಿಕರಿಗೆ ಸರ್ಕಾರ ವಿವಿಧ ರೀತಿಯ ಸೌಲಭ್ಯವನ್ನು ನೀಡಬೇಕಿದೆ. ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕಾರ್ಮಿಕ ಇಲಾಖೆ ನೀಡಬೇಕಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರ್ಮಿಕರ ಪಾತ್ರ ಬಹಳಷ್ಟು ಇದೆ. ಅವರು ಹಾಕಿದ ಮತದಿಂದ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಇದನ್ನು ಮನಗಂಡು ಶಾಸಕರಾದವರು ಕಾರ್ಮಿಕರ ಹಿತವನ್ನು ಕಾಯಬೇಕಿದೆ. ಕಾರ್ಮಿಕರನ್ನು ಅಧಿಕಾರಸ್ಥರು ಎಂದಿಗೂ ಸಹ ಮರೆಯಬಾರದು. ಕಾರ್ಮಿಕರನ್ನು ಜೊತೆಯಲ್ಲಿ ಇಟ್ಟುಕೊಂಡಲ್ಲಿ ಮುಂದಿನ ಬಾರಿಯೂ ಸಹ ನಮ್ಮ ಪಕ್ಷ ಹೆಚ್ಚಿನ ಸ್ಥಾನವನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಟಿಪ್ಪು ಖಾಸಿಂಆಲಿ, ಪ್ರಕಾಶ್ ರಾಮನಾಯ್ಕ್, ಖುದ್ದುಸ್, ಮಂಜುನಾಥ್, ಅಕ್ಬರ್, ಸಮೀವುಲ್ಲಾ, ಯೂಸಿಫ್, ಹಸೀನ, ಅಬ್ದುಲ್ ರಹಿಂ, ಜ್ಯೋತಿ ಲಕ್ಷ್ಮಿ, ನಾಗರಾಜ್,ಸಂಪತ್ ಕುಮಾರ್, ಮೈಲಾರಪ್ಪ, ಸಚಿನ್ ಮುಂತಾದವರು ಹಾಜರಿದ್ದರು.