ಮಂಗಳೂರು: ಮುಂದಿನ ವರ್ಷ ನವರಾತ್ರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬರಬೇಕು, ಬರಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಳೆದ ನವರಾತ್ರಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಿಥುನ್ ರೈ ಮಾತು ನಿಜವಾಯ್ತು ಎನ್ನುವ ಮಾತು ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಇತರೇ ಕಾಂಗ್ರೆಸ್ ನಾಯಕರು ಕೂಡ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಪ್ರಶಂಸಿಸಿ, ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಿಥುನ್ ರೈ ದಕ್ಷಿಣ ಕನ್ನಡದ ಅಭಿವೃದ್ದಿಗೆ ಒತ್ತಾಯ ಮಾಡುತ್ತಾ, ಬೆಂಗಳೂರಿನಂತೆ ವೇಗದಲ್ಲಿ ಮಂಗಳೂರು ಕೂಡ ಬೆಳೆಯಬೇಕು. ಅದಕ್ಕಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದರು. ಸ್ಥಳೀಯ ಹುಲಿ ವೇಷಧಾರಿ ಕಲಾವಿದರ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಕುರಿತಾಗಿಯೂ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ತಾವು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ, ಜನರ ಪ್ರೀತಿ ಆತ್ಮೀಯತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದೂ ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲೆ ದೇಶದ ಪ್ರಮುಖ ಸಾಂಸ್ಕೃತಿಕ ಮತ್ತು ಶಕ್ತಿಶಾಲಿ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.ವಿಶೇಷ ಅಂದರೆ, ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮಿಥುನ್ ರೈ ನೇತೃತ್ವದಲ್ಲಿ ಡಿಕೆಶಿಗೆ ನೀಡಲಾಗಿದ್ದ ಗೌರವ ಫಲಕದಲ್ಲೂ 2026 ಸಿಎಂ ಡಿಕೆ ಶಿವಕುಮಾರ್'' ಎಂದು ಉಲ್ಲೇಖಿಸಲಾಗಿತ್ತು. ಅದೀಗ ನಿಜವಾಗುತ್ತಿದೆ.