ಕನ್ನಡಪ್ರಭ ವಾರ್ತೆ ಮಹದೇವಪುರ
ಬಿಬಿಎಂಪಿಯು ಮಿಟ್ಟಗಾನಹಳ್ಳಿಯ ಘನತಾಜ್ಯ ವಿಲೇವಾರಿ ಘಟಕವನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದೆ, ಇದರಿಂದ ರಾಸಾಯನಿಕ ವಿಷ ನೀರು (ಲಿಚೆಟ್) ಅಂತರ್ಜಲಕ್ಕೆ ಸೇರುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕಸ ಘಟಕದ ಸಮೀಪದ ರಸ್ತೆಗೆ ಕಲ್ಲು ಮಣ್ಣು ಸುರಿದು ಕಸದ ಲಾರಿಗಳನ್ನು ತಡೆದು ಪ್ರತಿಭಟಿಸಿದರು.ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಹೊಸೂರು ಬಂಟೆಯ ಕಲ್ಲು ಕ್ವಾರಿಗಳಲ್ಲಿ ಬಿಬಿಎಂಪಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಕಣ್ಣೂರು, ಹೊಸೂರು ಬಂಟೆ, ಕಾಡುಸೊಣ್ಣಪ್ಪನಹಳ್ಳಿ, ಮಿಟ್ಟಿಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಟ್ಟಿದೆ. ನಗರದಲ್ಲಿ ಉತ್ಪತ್ತಿಯಾಗುವ ಶೇಕಡ ತ್ಯಾಜ್ಯವನ್ನು ಈ ಘಟಕದಲ್ಲಿ ಅವೈಜ್ಞಾನಿಕ ಸುರಿಯಲಾಗುತ್ತಿದೆ ಎಂದು ದೂರಿದರು.
ನಿರ್ವಹಣೆ ಇಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾತಾವರಣ ಕಲುಷಿತಗೊಂಡು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಘನ ತಾಜ್ಯ ಘಟಕಕ್ಕೆ ಹೊಂದಿಕೊಂಡಿರುವ ಕಣ್ಣೂರು ಕೆರೆಗೆ ರಾಸಾಯನಿಕ ವಿಷ (ಲಿಚ್ಚೆಡ್) ನೀರು ಸೇರ್ಪಡೆಯಾಗುತ್ತಿದೆ, ಇದರ ಪರಿಣಾಮವಾಗಿ ನಾಲ್ಕೈದು ಜಾನುವಾರುಗಳು ಸಾವಿಗೀಡಾಗಿವೆ, ಐದಾರು ಬೋರ್‌ವೆಲ್‌ಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ ಎಂದು ಆರೋಪಿಸಿದರು.ರಸ್ತೆ ತಡೆ ಮಾಡಿದ್ದರಿಂದ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಬಂದಿದ್ದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಸಂದರ್ಭದಲ್ಲಿ ಸ್ಥಳೀಯರಾದ ಮೋಹನ್ ರೆಡ್ಡಿ, ರಮೇಶ್, ಬ್ರಹ್ಮಾನಂದ ರೆಡ್ಡಿ, ರಾಘವೇಂದ್ರ, ದೇವರಾಜ್, ಬೈರೆಗೌಡ, ಶ್ರೀನಿವಾಸ, ಶ್ರೀರಾಮ್ ಇದ್ದರು.
ಮಾತು ತಪ್ಪಿದ ಡಿಸಿಎಂಈಗಾಗಲೇ ಘಟಕದಲ್ಲಿ ಮುನ್ನೂರು ಕೋಟಿಗೂ ಹೆಚ್ಚು ಲೀಟರ್ ಲಿಚ್ಚೆಡ್ ಉತ್ಪತ್ತಿಯಾಗಿದೆ, ಇದನ್ನು ಶುದ್ಧೀಕರಿಸುತ್ತಿಲ್ಲ. ಇದು ಕೆರೆ ಒಡಲು ಸೇರುತ್ತಿದೆ. ಇದರಿಂದ ಕೊಳವೆಬಾವಿಗಳಲ್ಲಿ ಲಿಚ್ಚೆಡ್ ಮಿಶ್ರಣಗೊಂಡಿದೆ. ಕುಡಿಯುವ ನೀರಿಗೂ ಆಹಕಾರ ಉಂಟಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಔಷಧಿ ಸಿಂಪಡಿಸುವ ಗೋಜಿಗೆ ಹೋಗುತ್ತಿಲ್ಲ. ಉಸ್ತುವಾರಿ ಸಚಿವರು ಡಿ.ಕೆ.ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರು ಕಳೆದ ಎಂಟು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಗ್ರಾಮಸ್ಥರ ಸಭೆಯಲ್ಲಿ ಸ್ಥಳೀಯರು ಕಲ್ಲಿನ ಕ್ವಾರಿಯಲ್ಲಿ ಕಸ ಸುರಿಯುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು, ಸರಿಯಾಗಿ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ, ಸೊಳ್ಳೆಗಳ ಕಾಟ, ದುರ್ವಾಸೆ ಬೀರುತ್ತಿದೆ ಎಂದರು.
ನಗರ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವವರೆಗೂ ಕಸ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಶಾಶ್ವತ ಪರಿಹಾರ ಭರವಸೆ ನೀಡುವವರಿಗೂ ಮಿಟ್ಟಗಾನಹಳ್ಳಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ. ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಬೇಕು ಇಲ್ಲದಿದ್ದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ.
-ಅಶೋಕ್, ಅಧ್ಯಕ್ಷ, ಕಣ್ಣೂರು ಗ್ರಾಮ ಪಂಚಾಯಿತಿ.