ಇಂಧನ ಬೆಲೆ ಏರಿಕೆಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork |  
Published : May 16, 2026, 01:00 AM IST
ಗದಗ ನಗರದ ಪೆಟ್ರೋಲ್‌ ಬಂಕ್‌ನಲ್ಲಿ ವಾಹನ ಸವಾರರು ಸರದಿಯಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಇಂಧನ ಬೆಲೆ ಏರಿಕೆ ವಾಹನ ಸವಾರರು, ಜನಸಾಮಾನ್ಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಕಡಿಮೆ ಇದ್ದಾಗ ಬೆಲೆ ಇಳಿಸದೇ, ಈಗ ಏಕಾಏಕಿ ಬೆಲೆ ಏರಿಕೆ ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಹೇಶ ಛಬ್ಬಿ

ಗದಗ: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ, ಆರ್ಥಿಕ ಸಂಕಷ್ಟ ಎದುರಾಗುವ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮಿತವ್ಯಯದ ಸಲಹೆಯ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರಗೆ ತಲಾ ₹3, ಸಿಎನ್‌ಜಿ ದರ ₹2 ಹೆಚ್ಚಳ ಆಗಿದ್ದು, ಇದಕ್ಕೆ ಜಿಲ್ಲೆಯ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದರೆ, ಹಲವರು ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ.

ಇಂಧನ ಬೆಲೆ ಏರಿಕೆ ವಾಹನ ಸವಾರರು, ಜನಸಾಮಾನ್ಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಕಡಿಮೆ ಇದ್ದಾಗ ಬೆಲೆ ಇಳಿಸದೇ, ಈಗ ಏಕಾಏಕಿ ಬೆಲೆ ಏರಿಕೆ ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಐಷಾರಾಮಿ ಕಾರುಗಳಲ್ಲಿ ಸುತ್ತಾಡುವರಿಗೆ, ಶ್ರೀಮಂತರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟುವುದಿಲ್ಲ, ನೇರವಾಗಿ ಕಾರ್ಮಿಕ ವರ್ಗ, ಬಡವರು, ರೈತರ, ಸಾಮಾನ್ಯ ಜನರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ ಕೇಂದ್ರ ಸರ್ಕಾರ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಭೀತಿ ಜಿಲ್ಲೆಯೇ ಜನತೆಯನ್ನ ಕಾಡುತ್ತಿದ್ದು, ಮೊದಲು ಸಿಲಿಂಡರ್‌ ಬೆಲೆ ಏರಿಕೆಯಾಯಿತು. ಈಗ ಡೀಸೆಲ್‌, ಪೆಟ್ರೋಲ್‌ ದರ ಹೆಚ್ಚಳಗೊಂಡಿದ್ದು, ಇದರಿಂದ ಕಾಳು- ಕಡಿಗಳ ಬೆಲೆ ಏರಿಕೆಯಾಗಲಿದೆ ಎಂದು ಜನರು ಹೇಳುತ್ತಿದ್ದಾರೆ.

ರಾಜ್ಯ ಸರ್ಕಾರ ಹೆಣ್ಣುಮಕ್ಕಳಿಗೆ ಬಸ್‌ ಫ್ರೀ ಮಾಡಿದ ಮೇಲೆ ಬಸ್‌ಗಳಲ್ಲಿ ಕಾಲಿಡಲು ಜಾಗವಿರುವುದಿಲ್ಲ, ನಮ್ಮ ದಿನನಿತ್ಯದ ಕೆಲಸಗಳಿಗೆ ಹೋಗಿ ಬರಲು ಬಸ್‌ಗಳ ಸಂಖ್ಯೆ ಬಹಳ ವಿರಳ. ಜತೆಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮಿತವ್ಯಯ ಮಾಡಲು ಅದಕ್ಕೆ ತಕ್ಕಂತ ಅನುಕೂಲಗಳೇ ಇಲ್ಲ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಕೇಂದ್ರದ ಮೇಲೆ ರಾಜ್ಯದವರು, ರಾಜ್ಯದ ಮೇಲೆ ಕೇಂದ್ರದವರು ಹೀಗೆ ಜನ ಸಮಾನ್ಯರ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಸರ್ಕಾರಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಅನಿವಾರ್ಯ: ಹಲವರು ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಮಧ್ಯಪ್ರಾಚ್ಯ ಯುದ್ಧ ನಡೆಯುತ್ತಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಇಡೀ ಜಗತ್ತಿಗೆ ಸಮಸ್ಯೆ ಬಂದಿದೆ. ಕೇಂದ್ರ ಸರ್ಕಾರಕ್ಕೆ ಸಹಕರಿಸಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಬಂಕ್‌ಗಳು ಫುಲ್‌ ರಶ್‌: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ ಎನ್ನುವು ಸುದ್ದಿ ತಿಳಿಯುತ್ತಲೇ ಅವಳಿ ನಗರದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಸವಾರರು ಸರದಿಯಲ್ಲಿ ನಿಂತು ಪೆಟ್ರೋಲ್, ಡೀಸೆಲ್‌ ತುಂಬಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕಷ್ಟಕರ: 12 ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆಯೇ ಬೆಲೆ ಏರಿಕೆ ಮಾಡುವುದಾಗಿದೆ. ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಇದರಿಂದ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುವುವು. ಬಡವರು, ಮಧ್ಯಮ ವರ್ಗದ ಜನರು, ಕಾರ್ಮಿಕರು, ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.

ಬೆಲೆ ಏರಿಕೆ ಅನಿವಾರ್ಯ: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ಜಗತ್ತಿನಾದ್ಯಂತ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶದಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ ಕೇವಲ ₹3 ಏರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಮಾಡುವುದು ಅನಿವಾರ್ಯ. ಜನರಿಗೆ ತೊಂದರೆ ಕೊಡಬೇಕೆನ್ನುವುದು ಕೇಂದ್ರ ಸರ್ಕಾರದ ಉದ್ದೇಶವಲ್ಲ. ಕಚ್ಚಾತೈಲ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ತಿಂಗಳು ಅಂದಾಜು ₹30 ಸಾವಿರ ಕೋಟಿ ಹಾನಿಯಾಗುತ್ತಿದೆ. ಅದನ್ನು ಭರಿಸಲು ಸಣ್ಣ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ತಿಳಿಸಿದರು.

ಜನಸಾಮಾನ್ಯರಿಗೆ ಸಮಸ್ಯೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಿಸಿ ನೇರವಾಗಿ ಜನಸಾಮಾನ್ಯರಿಗೆ ತಟ್ಟುತ್ತದೆ. ಸದ್ಯ ಮುಂಗಾರು ಬಿತ್ತನೆ ಆರಂಭ ದಿನಗಳಲ್ಲಿ ಬೆಲೆ ಏರಿಕೆ ಮಾಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಬೀಜ, ಗೊಬ್ಬರ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುತ್ತದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ ಎಂದು ರೈತ ದೇವರಾಜ ಸಂಗನಪೇಟಿ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವಂಶ ಬಲಿ, ಗೋವು ಸಾಗಾಣಿಕೆ ನಿಷೇಧಿಸಲು ಮನವಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹ