ಯಲಬುರ್ಗಾ: ಪ್ರತಿಯೊಬ್ಬ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ್ ಕೊರ್ಲಳ್ಳಿ ಹೇಳಿದರು.
ಕ್ಷೇತ್ರದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರು ಎಲ್‌ಕೆಜಿಯಿಂದ ಪಿಜಿ, ತಾಂತ್ರಿಕ ಶಿಕ್ಷಣದವರೆಗೂ ವ್ಯವಸ್ಥೆ ಕಲ್ಪಿಸಿಸದ್ದಾರೆ. ೬ ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಈ ಹಿಂದೆ ಶಿಕ್ಷಣ ಪಡೆಯಲು ಬೇರೆ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇತ್ತು. ಇದೆಲ್ಲ ಈಗ ಕ್ಷೇತ್ರದಲ್ಲಿಯೇ ಕಲಿಯುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಇದೆಲ್ಲವನ್ನು ಸದುಪಯೋಗ ಪಡಿಸಿಕೊಂಡು ಸತತ ಅಧ್ಯಯನದಿಂದ ಸಾಧನೆ ಮಾಡಬೇಕು ಎಂದರು.
ಬೇವೂರಿನಲ್ಲಿ ವಸತಿಯುಕ್ತ ಪದವಿ ಕಾಲೇಜು ಪ್ರಾರಂಭವಾಗಲಿದೆ. ಈಗಾಗಲೇ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. ಇಷ್ಟೊಂದು ಶೈಕ್ಷಣಿಕ ವ್ಯವಸ್ಥೆ ಬೇರೆ ಯಾವ ತಾಲೂಕಿನಲ್ಲಿ ಇಲ್ಲ. ಅದಕ್ಕೆ ಶಾಸಕ ರಾಯರಡ್ಡಿ ಕೊಡುಗೆ ಅಪಾರವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕಾಗಿದ್ದು, ಇಲ್ಲಿ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆ ಪಡೆದು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.ನಿವೃತ್ತ ಡಿಡಿಪಿಐ ಎಸ್.ಡಿ. ಗಾಂಜಿ, ಆರ್.ಕೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ, ಪದವಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾದಾಗ ಮಾತ್ರ ಉತ್ತಮ ಸಾಧನೆ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಕೆ.ಎಚ್. ಛತ್ರದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.