ಪಶ್ಚಿಮ ಘಟ್ಟದ ಮರ-ಸಸ್ಯಗಳಲ್ಲಿದೆ ಶೇ.25ರಷ್ಟು ಆಧುನಿಕ ಔಷಧಿ ಮೂಲ

KannadaprabhaNewsNetwork |  
Published : May 16, 2026, 01:00 AM IST
ದಕ್ಷಿಣ ಭಾರತದಲ್ಲಿ ಕೃಷಿ ಮತ್ತು ಆರ್ಥಿಕತೆ ಮೇಲೆ ಪಶ್ಚಿಮ ಘಟ್ಟದ ಪ್ರಭಾವ ಮತ್ತು ಪರಿಣಾಮ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಪಶ್ಚಿಮ ಘಟ್ಟದ ಪ್ರದೇಶದ ಮಹತ್ವವನ್ನು ಅಕಾಡೆಮಿಕ್ ವಲಯದವರು ಹಾಗೂ ಪರಿಸರವಾದಿಗಳು ಹೆಚ್ಚಾಗಿ ಪ್ರಸ್ತಾಪಿಸುತ್ತಿದ್ದರೂ, ಅದರ ಸುತ್ತಲಿನ ಸಾಮಾನ್ಯ ಜನರು ಭವಿಷ್ಯದ ದೃಷ್ಟಿಯಿಂದ ಅದರ ಮೌಲ್ಯವನ್ನು ಇನ್ನೂ ಸಮರ್ಪಕವಾಗಿ ಅರ್ಥಮಾಡಿಕೊಂಡಿಲ್ಲ.

ಧಾರವಾಡ:

ಇಂದು ಬಳಕೆಯಲ್ಲಿರುವ ಆಧುನಿಕ ಔಷಧಿಗಳಲ್ಲಿ ಸುಮಾರು ಶೇ. 25ರಷ್ಟು ಔಷಧಿಗಳು ಪಶ್ಚಿಮ ಘಟ್ಟದ ಮರ, ತೊಗಟೆ, ಔಷಧೀಯ ಸಸ್ಯ ಹಾಗೂ ಹುಲ್ಲುಗಳಿಂದ ಉಗಮಿಸಿವೆ. ಆದರೆ, ಅಂತಿಮ ಉತ್ಪನ್ನಗಳಿಗೆ ಮಾತ್ರ ಪ್ರಚಾರ ದೊರೆಯುತ್ತಿದ್ದು, ಅವುಗಳಿಗೆ ಮೂಲವಾಗಿರುವ ನೈಸರ್ಗಿಕ ಸಂಪತ್ತಿನ ಮಹತ್ವ ಕಡೆಗಣಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಕೋ ವಾಚ್‌ ವತಿಯಿಂದ ಆಯೋಜಿಸಿದ್ದ ‘ದಕ್ಷಿಣ ಭಾರತದಲ್ಲಿ ಕೃಷಿ ಮತ್ತು ಆರ್ಥಿಕತೆ ಮೇಲೆ ಪಶ್ಚಿಮ ಘಟ್ಟದ ಪ್ರಭಾವ ಮತ್ತು ಪರಿಣಾಮ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮ ಘಟ್ಟದ ಪ್ರದೇಶದ ಮಹತ್ವವನ್ನು ಅಕಾಡೆಮಿಕ್ ವಲಯದವರು ಹಾಗೂ ಪರಿಸರವಾದಿಗಳು ಹೆಚ್ಚಾಗಿ ಪ್ರಸ್ತಾಪಿಸುತ್ತಿದ್ದರೂ, ಅದರ ಸುತ್ತಲಿನ ಸಾಮಾನ್ಯ ಜನರು ಭವಿಷ್ಯದ ದೃಷ್ಟಿಯಿಂದ ಅದರ ಮೌಲ್ಯವನ್ನು ಇನ್ನೂ ಸಮರ್ಪಕವಾಗಿ ಅರ್ಥಮಾಡಿಕೊಂಡಿಲ್ಲ ಎಂದು ಹೇಳಿದರು.ಹಸಿರು ಕ್ರಾಂತಿಯ ಸಾಧನೆಯಲ್ಲಿ ವಿಜ್ಞಾನಿಗಳ ಪಾತ್ರ ಮಹತ್ತರವಾಗಿದೆ ಎಂದ ಅವರು, ಎತ್ತರವಾಗಿ ಬೆಳೆಯುತ್ತಿದ್ದ ಗೋಧಿ ಮತ್ತು ಭತ್ತದ ತಳಿಗಳನ್ನು

ಕಡಿಮೆ ಎತ್ತರದ, ಹೆಚ್ಚಿನ ಉತ್ಪಾದನೆ ನೀಡುವ ತಳಿಗಳಾಗಿ ಪರಿವರ್ತಿಸಲು ಪಶ್ಚಿಮ ಘಟ್ಟದಲ್ಲಿ ದೊರಕಿದ ಬೆಳೆ ಜೀನ್ಯಗಳನ್ನು ಆಧುನಿಕ ಕೃಷಿ ಸಂಶೋಧನೆಗೆ ಜೋಡಿಸಿರುವುದೇ ಕಾರಣ ಎಂದು ವಿವರಿಸಿದರು.

ಜೈವ ವೈವಿಧ್ಯತೆಯ ಆರೋಗ್ಯ ಕ್ಷೇತ್ರದ ಕೊಡುಗೆ ಉಲ್ಲೇಖಿಸಿದ ಅವರು, ಮಲೇರಿಯಾ ಸೇರಿದಂತೆ ಅನೇಕ ರೋಗಗಳಿಗೆ ಬಳಸುವ ಔಷಧಿಗಳ ಮೂಲ ಪಶ್ಚಿಮ ಘಟ್ಟದ ಸಸ್ಯ ಸಂಪತ್ತೇ ಆಗಿದೆ. ಪಶ್ಚಿಮ ಘಟ್ಟವು ಜೈವ ತಂತ್ರಜ್ಞಾನ ಮತ್ತು ಜನ್ಯ ಎಂಜಿನಿಯರಿಂಗ್ ಕ್ಷೇತ್ರಗಳ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಅರಣ್ಯ ಪ್ರದೇಶಗಳಲ್ಲಿ ದೊರೆಯುವ ಜೇನ್ಯಗಳನ್ನು ಪ್ರಯೋಗಾಲಯಗಳಲ್ಲಿ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ಪಶ್ಚಿಮಘಟ್ಟ ಮಾನವ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿ ಪದ್ಧತಿಗಳ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಪರಿಸರವಾದಿ ಸುರೇಶ ಹೆಬ್ಳಿಕಾರ್, ಇಂದು ದೊಡ್ಡ ಪ್ರಮಾಣದಲ್ಲಿ ಏಕಬೆಳೆ ಪದ್ಧತಿಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಸಕ್ಕರೆ ಮತ್ತು ಎಥನಾಲ್ ಉತ್ಪಾದನೆ ಅಗತ್ಯವಿದೆಯೇ ಎಂಬುದನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದರು.ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ವರದಿ ಉಲ್ಲೇಖಿಸಿದ ಅವರು, ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತ ಹೆಚ್ಚುತ್ತಿರುವುದಕ್ಕೆ ಅರಣ್ಯ ನಾಶ, ಅಸಂಘಟಿತ ಗುಡ್ಡ ಕಡಿತ ಹಾಗೂ ತೀವ್ರ ಇಳಿಜಾರು ನಿರ್ಮಾಣವೇ ಪ್ರಮುಖ ಕಾರಣ. ಎಲ್ಲ ಆರ್ಥಿಕ ಚಟುವಟಿಕೆಗಳು ಒಂದಲ್ಲೊಂದು ರೀತಿಯಲ್ಲಿ ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿವೆ. ಅದರ ಸಮೃದ್ಧ ಜೈವ ವೈವಿಧ್ಯತೆ ಹಾಗೂ ಕೃಷಿಯಲ್ಲಿ ಅದರ ಉಪಯೋಗದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಸಮಯ ಬಂದಿದೆ. ಮಣ್ಣಿನ ಪೋಷಕಾಂಶ ಮತ್ತು ತೇವಾಂಶ ಪಶ್ಚಿಮ ಘಟ್ಟದ ಅಮೂಲ್ಯ ಕೊಡುಗೆಗಳಾಗಿವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿವಿ ಕುಲಪತಿ ಪಿ.ಎಲ್. ಪಾಟೀಲ, ಅರಣ್ಯ ವಿಜ್ಞಾನ ವಿದ್ಯಾರ್ಥಿಗಳು ಪಶ್ಚಿಮಘಟ್ಟ ರಕ್ಷಣೆಯಲ್ಲಿ “ಯೋಧರು” ಆಗಬೇಕು ಎಂದು ಕರೆ ನೀಡಿದರು. ಪಶ್ಚಿಮ ಘಟ್ಟವನ್ನು “ಜೀವನದ ಪ್ರಯೋಗಾಲಯ” ಎಂದು ಬಣ್ಣಿಸಿದ ಅವರು, ಇದು ಬೆಳೆ ಹಾಗೂ ಕಳೆ ವಿಜ್ಞಾನಿಗಳ ಪ್ರಮುಖ ಅಧ್ಯಯನ ಕೇಂದ್ರವಾಗಿಯೇ ಮುಂದುವರಿದಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವಂಶ ಬಲಿ, ಗೋವು ಸಾಗಾಣಿಕೆ ನಿಷೇಧಿಸಲು ಮನವಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹ