ಬಳ್ಳಾರಿ: ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಕುಡಿತಿನಿ ಭಾಗದ ಏಳು ಗ್ರಾಮಗಳ ರೈತರಿಗೆ ಭೂಸ್ವಾಧೀನದಲ್ಲಾದ ಮೋಸವನ್ನು ಖಂಡಿಸಿ "ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ " ನೇತೃತ್ವದಲ್ಲಿ ಕರೆ ನೀಡಿದ್ದ ಬಳ್ಳಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ಅಂಗವಾಗಿ ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು. ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಏಳು ಗ್ರಾಮಗಳ ನೂರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗಡಗಿಚನ್ನಪ್ಪ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕೈಗಾರಿಕೆಗಳ ಸ್ಥಾಪನೆಗೆಂದು ರೈತರಿಂದ ವಶಪಡಿಸಿಕೊಂಡಿರುವ ಜಮೀನುಗಳಿಗೆ ನ್ಯಾಯಯುತ ಬೆಲೆ ನೀಡಬೇಕು. ಕೂಡಲೇ ಮುಖ್ಯಮಂತ್ರಿ ಸಭೆ ಕರೆದು ಸಂತ್ರಸ್ತರ ಹಿತ ಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಹೋರಾಟ ಸಮಿತಿಯ ಪ್ರಮುಖರಾದ ಎಸ್.ವೈ. ಗುರುಶಾಂತ್, ಯು.ಬಸವರಾಜ್ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ರೈತರಿಂದ ಕೆಐಡಿಬಿ ಮೂಲಕ ಬಲವಂತವಾಗಿ ಅತಿ ಕಡಿಮೆ ಬೆಲೆಗೆ 12 ಸಾವಿರಕ್ಕೂ ಅಧಿಕ ಎಕರೆ ಭೂಮಿ ಪಡೆದು ಈವರೆಗೆ ಕಾರ್ಖಾನೆ ಸ್ಥಾಪಿಸದೇ ಮೋಸ ಎಸಗಿರುವ ಕ್ರಮವನ್ನು ಖಂಡಿಸಿದರು. ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಯುತ ಬೆಲೆ ನೀಡಬೇಕು. ಘೋಷಿತ ಉದ್ದೇಶಕ್ಕೆ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಕೂಡದು. ನ್ಯಾಯಯುತ ಪರಿಹಾರ ನೀಡದಿದ್ದಲ್ಲಿ ರೈತರ ಜಮೀನುಗಳನ್ನು ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ ಕೂಡಲೇ ಭೂ ಸಂತ್ರಸ್ತರ ಸಮಸ್ಯೆ ನೀಗಿಸಲು ಮುಂದಾಗಬೇಕು. ಕೈಗಾರಿಕೆ ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಪಡೆದ ಜಾಗವನ್ನು ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದ ಹೋರಾಟಗಾರರು ರೈತರಿಗೆ ಅನ್ಯಾಯ ಎಸಗಿ ಭೂ ಕಬಳಿಸಿದ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು, ಸಿಐಟಿಯು ರಾಜ್ಯ ಮುಖಂಡ ಜೆ.ಸತ್ಯಬಾಬು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.