ಕಸಬಾ ಹೋಬಳಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : May 19, 2025 2:17 AM
Follow Us

ಸಾರಾಂಶ

ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಭಾನುವಾರ ಕರೆ ನೀಡಿದ್ದ ಕಸಬಾ ಹೋಬಳಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಭಾನುವಾರ ಕರೆ ನೀಡಿದ್ದ ಕಸಬಾ ಹೋಬಳಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಸಬಾ ವ್ಯಾಪ್ತಿಯ ಹರೀಸಂದ್ರ, ಮಾಯಗಾನಹಳ್ಳಿ, ಬಿಳಗುಂಬ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಕೆಲ ವರ್ತಕರು ಮಾತ್ರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ವಾಹನ ಸಂಚಾರ ಎಂದಿನಂತಿತ್ತು.

ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದ ಎದುರು ಸೇರಿದ ವಿವಿಧ ಹಳ್ಳಿಗಳ ಗ್ರಾಮಸ್ಥರು ಬೈಕ್ ರ್ಯಾಲಿ ನಡೆಸಿ ಪ್ರಮುಖ ವೃತ್ತಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

ಚಿಕ್ಕೇಗೌಡನದೊಡ್ಡಿಯಿಂದ ಆರಂಭಗೊಂಡ ಬೈಕ್ ರ್ಯಾಲಿ ಹರೀಸಂದ್ರ, ಮಾದಾಪುರ, ಕುಂಬಾರದೊಡ್ಡಿ, ಎಲೆದೊಡ್ಡಿ, ಊರಮಾರದೊಡ್ಡಿ ಮಾರ್ಗವಾಗಿ ಹಳ್ಳಿಮಾಳ ವೃತ್ತಕ್ಕೆ ಆಗಮಿಸಿತು. ರ್ಯಾಲಿ ಉದ್ದಕ್ಕೂ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿದರು.

ಹಳ್ಳಿಮಾಳ ವೃತ್ತದಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಗ್ರಾಮಸ್ಥರು, ಈ ಭಾಗದ ರೈತರ ಜೀವನಕ್ಕೆ ಕೊಳ್ಳಿ ಇಟ್ಟು ರೈತರ ನೆಮ್ಮದಿ, ಆರೋಗ್ಯ ಹಾಳು ಮಾಡಿ ನೀರು ಗಾಳಿಯನ್ನು ಕಲುಷಿತಗೊಳಿಸುವ ಕಸ ವಿಲೇವಾರಿ ಘಟಕವನ್ನು ಯಾವ ಕಾರಣಕ್ಕೂ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು.

ಹಳ್ಳಿಮಾಳದಲ್ಲಿ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ವೇಳೆ ಹಿರಿಯ ಮುಖಂಡ ವೀರೇಗೌಡ ಮಾತನಾಡಿ, ಸರ್ಕಾರಿ ಗೋಮಾಳ ಜಮೀನು ಸಿಕ್ಕಿದೆ ಎಂದು ಬಿಡದಿ ಮತ್ತು ರಾಮನಗರದ ಕಸ ವಿಲೇವಾರಿಗೆ ಸುಮಾರು 20 ಎಕರೆ ಜಮೀನಿನಲ್ಲಿ ಕಸ ಘಟಕ ನಿರ್ಮಾಣ ಮಾಡಲು ಹೊರಟಿದೆ. ಕೂಡಲೇ ಕಸ ಘಟಕ ನಿರ್ಮಾಣ ಕೆಲಸ ಸ್ಥಗಿತಗೊಳಿಸಿ ಉತ್ತಮ ಪರಿಸರ ಉಳಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಹಸಿರು ಪ್ರದೇಶ ಅದರಲ್ಲೂ ಅರ್ಕಾವತಿ ನದಿ ತೀರದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವ ಮೂಲಕ ಕೃಷಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಇಲ್ಲಿ ಘಟಕ ನಿರ್ಮಾಣವಾದರೆ ನದಿ ನೀರು, ಗಾಳಿ ಕಲುಷಿತಗೊಳ್ಳುತ್ತದೆ. ಜತೆಗೆ ರೇಷ್ಮೆ, ಹೈನುಗಾರಿಕೆ ಮೇಲೂ ಪರಿಣಾಮ ಬೀರುತ್ತದೆ. ಜನರ ಬದುಕಿಗೆ ಮುಳ್ಳಾಗಲಿರುವ ಕಸ ವಿಲೇವಾರಿ ಘಟಕದ ಕೆಲಸವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುಗ್ಗನಹಳ್ಳಿ ಗ್ರಾಮದ ಮುಖಂಡ ಸುಗ್ಗನಹಳ್ಳಿ ರಾಮಕೃಷ್ಣ ಮಾತನಾಡಿ, ಗ್ರಾಮದ ಹಿರಿಯರಾದ ದೊಡ್ಡವೀರೇಗೌಡರು ಮುಖಂಡರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಭೇಟಿಯಾಗಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಮನವಿ ಮಾಡಿದರು ಹಗುರವಾಗಿ ಮಾತನಾಡಿ ಕಳುಹಿಸಿದ್ದಾರೆ. ಘಟಕ ನಿರ್ಮಾಣದಿಂದ ಹಿಂದೆ ಸರಿಯದಿದ್ದರೆ ಯುವಕರು, ಮಹಿಳೆಯರು ಜೊತೆಗೂಡಿ ಚಳವಳಿಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಮುಖಂಡ ಪಾದರಹಳ್ಳಿ ಚಂದ್ರಶೇಖರ್ ಮಾತನಾಡಿ, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಭಾಗದ ರೈತರೆಲ್ಲರು ಶಾಂತಿಪ್ರಿಯರು. ಇದನ್ನೇ ಆಡಳಿತ ವರ್ಗದವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತಿನ ಹೆಸರಿನಲ್ಲಿ ನಿಯೋಜಿಸಿ ರೈತರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದ್ವಾಪರಯುಗ, ತ್ರೇತಯುಗದ ಇತಿಹಾಸವಿರುವ ಈ ಪುಣ್ಯ ಭೂಮಿ ಪುರಾಣ ಪ್ರಸಿದ್ಧಿಯನ್ನೂ ಪಡೆದಿದೆ. ಅರ್ಕಾವತಿ ನದಿ ಹರಿಯುತ್ತಿದ್ದೂ, ಅದನ್ನು ಬಳಸಿಕೊಂಡು ರೈತರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಇದೇ ಪುಣ್ಯ ಭೂಮಿಯನ್ನು ಶಾಸಕರು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಭಾಗದ ಜನರು ಮಾಡಿರುವ ಅನ್ಯಾಯವಾದರು ಏನೆಂದು ಪ್ರಶ್ನೆ ಮಾಡಿದರು.

ಹರೀಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಸಿ.ಶಿವಕುಮಾರ್, ಮುಖಂಡರಾದ ಕಷ್ಣೇಗೌಡ, ರಾಮಣ್ಣ, ಶಿವರಾಮು, ಸಂತೋಷ್, ಶಿವು, ಯೋಗಾನಂದ್, ಚಿಕ್ಕಣ್ಣ, ದೀಪು, ರವಿ, ಉಮೇಶ್, ನಾಗರಾಜ್, ಮಹದೇವ್, ಮಾಯಗಾನಹಳ್ಳಿ ಸುರೇಶ್ .ಬಿ.ಪಿ.ಪ್ರಕಾಶ್, ಸಿದ್ದಲಿಂಗಪ್ಪ, ಸುರೇಂದ್ರ ನಾಥ, ಗೋಪಾಲ್, ಶಿವಾನಂದ್ ಮತ್ತಿತರರು ಭಾಗವಹಿಸಿದ್ದರು.

----------------------------------

18ಕೆಆರ್ ಎಂಎನ್ 1,2.ಜೆಪಿಜಿ

1.ಹಳ್ಳಿಮಾಳ ವೃತ್ತದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

2.ಕಸ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಬೈಕ್ ರ್ಯಾಲಿ ನಡೆಸಿದರು.

-----------------------------------