ಸಮಸ್ಯೆ ಪರಿಹಾರ । ಹಾಸನ –ಮಡಿಕೇರಿ ರಾಜ್ಯ ಹೆದ್ದಾರಿ ಬದಿ ನಡೆಯುತ್ತಿದ್ದ ನಿರ್ಮಾಣ । ತಡೆಯೊಡ್ಡಿದ್ದ ಕೆಲ ಮುಸ್ಲಿಂ ನಾಯಕರು
ಕನ್ನಡಪ್ರಭ ವಾರ್ತೆ ಅರಕಲಗೂಡುಫುಡ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿದ್ದ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಕಾಮಗಾರಿ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಪಟ್ಟಣದ ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಎದುರಿನ ಹಾಸನ–ಮಡಿಕೇರಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಶುಕ್ರವಾರ ಮುಸ್ಲಿಂ ಸಮುದಾಯದ ಕೆಲವರು ಬಂದು ಕಾಮಗಾರಿ ನಡೆಸುತ್ತಿರುವ ಸ್ಥಳದ ಹಿಂದೆ ಖಬರ್ ಸ್ಥಾನವಿದೆ. ಇಲ್ಲಿ ಫುಡ್ ಕೋರ್ಟ್ ನಿರ್ಮಾಣವಾದಲ್ಲಿ ಖಬರ ಸ್ಥಾನಕ್ಕೆ ಕಸ ಹಾಕುವುದು, ಕೊಳಕು ಮಾಡಿ ಪವಿತ್ರತೆಗೆ ಧಕ್ಕೆ ತರಲು ಸಾಧ್ಯತೆ ಇರುವುದರಿಂದ ಈ ಸ್ಥಳದಲ್ಲಿ ಫುಡ್ ಕೋರ್ಟ್ ನಿರ್ಮಾಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕಾಮಗಾರಿ ನಿಲ್ಲಿಸಿದ್ದರು.ಶನಿವಾರ ಸ್ಥಳಕ್ಕೆ ಬಂದ ಶಾಸಕ ಎ.ಮಂಜು, ಕೊಣನೂರಿನಲ್ಲಿ ಮಾಗಡಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದಾಗಿ ರಸ್ತೆ ಬದಿಯ ವ್ಯಾಪಾರಿಗಳಿಗೆ ತಮ್ಮ ನಿತ್ಯದ ವಹಿವಾಟನ್ನು ನಡೆಸಲು ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಶಾಶ್ವತ ಪರಿಹಾರ ಒದಗಿಸುವ ದೃಷ್ಟಿಯಿಂದ ರಸ್ತೆ ಬದಿಯಲ್ಲಿರುವ ಸರ್ಕಾರಿ ಸ್ಥಳದಲ್ಲಿ ಮಳಿಗೆಗಳನ್ನು ನಿರ್ಮಿಸಬೇಕು ಎಂದು ತೀರ್ಮಾನಿಸಿ ತಾಪಂನ 23 ಲಕ್ಷ ರು. ಅನುದಾನದಲ್ಲಿ ಫುಡ್ ಕೋರ್ಟ್ ನಿರ್ಮಿಸಲು ಪ್ರಾರಂಭವಾಗಿರುವ ಕಾಮಗಾರಿಯನ್ನು ಕೆಲವರು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಇದು ಸರ್ಕಾರಿ ಸ್ಥಳವಾಗಿರುವುದರಿಂದ ಯಾವುದೋ ಒಂದು ಸಮುದಾಯಕ್ಕೆ ಈ ಸ್ಥಳವನ್ನು ಬಿಟ್ಟುಕೊಡಲಾಗುವುದಿಲ್ಲ. ಯಾವ ಸಮುದಾಯದ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇಲ್ಲ. ಕೆಲ ವರ್ಷಗಳ ಹಿಂದೆ ಇಲ್ಲಿರುವ ಖಬರ ಸ್ಥಾನದ ಜಾಗವು ಮುಸ್ಲಿಂ ಸಮುದಾಯಕ್ಕೆ ದಕ್ಕಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಿ ಬೀದಿ ಬದಿ ವ್ಯಾಪಾರ ಮಾಡುವ ಎಲ್ಲಾ ಸಮುದಾಯದವರಿಗೂ ಸಹ ಅವಕಾಶ ಮಾಡಿಕೊಡಲಾಗುವುದು. ಇದರಿಂದಾಗಿ ಗ್ರಾಮ ಪಂಚಾಯಿತಿಯು ಬಾಡಿಗೆಯನ್ನು ನಿಗದಿಪಡಿಸಿ ಅದಾಯ ಪಡೆಯಬಹುದು. ಬೀದಿ ಬದಿ ವ್ಯಾಪಾರಗಳಿಗೆ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಟ್ಟದಂತಾಗುತ್ತದೆ. ಖಬರ ಸ್ಥಾನದ ಒಳಗೆ ಕಸ ಹಾಕದಂತೆ ಶೀಟ್ ಹೊಡೆದು, ಬರುವ ಕಸವನ್ನು ಡಬ್ಬದಲ್ಲಿ ಹಾಕಿ ಗ್ರಾಮ ಪಂಚಾಯಿತಿಯ ಟ್ರ್ಯಾಕ್ಟರ್‌ನಲ್ಲಿ ಸಾಗಿಸಿ ಸ್ವಚ್ಚತೆ ಕಾಪಾಡಲಾಗುವುದು ಎಂದು ತಿಳಿಸಿದರು.ಕೆಲವರು ತಮ್ಮ ರಾಜಕೀಯ ಅನುಕೂಲಕ್ಕೆ ಸಮುದಾಯಗಳನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದು ಅಂತಹವರ ಮಾತಿಗೆ ಕಿವಿಗೊಟ್ಟು ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಸಾರ್ವಜನಿಕ ಉದ್ದೇಶ ಮುಖ್ಯವೇ ಹೊರತು ಎಲ್ಲರೂ ಹೇಳುವಂತೆ ಯಾವುದೇ ಕೆಲಸವನ್ನು ಮಾಡಲಾಗುವುದಿಲ್ಲ. ಎಲ್ಲಾ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದ ಕಾಪಾಡಿಕೊಂಡು ಅಭಿವೃದ್ಧಿ ಮಾಡುವ ಉದ್ದೇಶ ಇದೆ. ಮುಂದಿನ ದಿನಗಳಲ್ಲಿ ಕೊಣನೂರಿನ ಕೆಲವು ಕಡೆ ರಸ್ತೆ ಬದಿ ವ್ಯಾಪಾರಿಗಳಿಗಾಗಿ ಮಳಿಗೆ ನಿರ್ಮಾಣ ಆಡಿ ಅವರಿಗೆ ಆಶ್ರಯ ನೀಡಲಾಗುವುದು. ಕೊಣನೂರಿನಲ್ಲಷ್ಟೇ ಅಲ್ಲದೆ ರಾಮನಾಥಪುರ, ಕೇರಳಾಪುರ ಮತ್ತು ಅರಕಲಗೂಡಿನಲ್ಲೂ ಸಹ ಫುಡ್ ಕೋರ್ಟ ನಿರ್ಮಾಣ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಮತ್ತು ಸಾರ್ವಜನಿಕರಿದ್ದರು.ಫುಡ್ ಕೋರ್ಟ್ ನಿರ್ಮಾಣಕ್ಕಾಗಿ ಗುರ್ತಿಸಲಾದ ಜಾಗಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು.