ಪಾರದರ್ಶಕತೆಯಿಂದ ಕೆಲಸ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕರ ಸಲಹೆ

KannadaprabhaNewsNetwork |  
Published : Jan 09, 2025, 12:46 AM IST
೮ಕೆಎಲ್‌ಆರ್-೬ಕೋಲಾರದ ಜಿಪಂ ಸಭಾಂಗಣದಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ೭ ಕಾರ್ಯಕರ್ತರಿಗೆ ಹಾಗೂ ೫೩ ಸಹಾಯಕರಿಗೆ ಶಾಸಕ ಕೊತ್ತೂರು ಮಂಜುನಾಥ್ ನೇಮಕಾತಿ ಆದೇಶ ಪತ್ರ ನೀಡುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ನಂತರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಕೊಟ್ಟಿದ್ದಾರೆ. ಈಗಾಗಲೇ ಕೋಲಾರ ಜಿಲ್ಲೆಗೆ ಗ್ಯಾರಂಟಿ ಯೋಜನೆಯ ಮೂಲಕ ೮೩೦ ಕೋಟಿ ರು. ಹಣ ಬಿಡುಗಡೆಯಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಲಂಚ ತೆಗೆದುಕೊಳ್ಳದೇ ಆದೇಶ ಪತ್ರ ನೀಡಿದ್ದೇವೆ, ನೀವೂ ಅಷ್ಟೇ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ತಾಲೂಕಿಗೆ ಹೆಸರು ತರಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು.

ನಗರದ ಜಿಪಂ ಸಭಾಂಗಣದಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ೭ ಕಾರ್ಯಕರ್ತೆಯರಿಗೆ ಹಾಗೂ ೫೩ ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿ, ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿದ್ದು ಪ್ರಾಮಾಣಿಕರಿಗೆ, ಅರ್ಹತೆ ಇರುವವರಿಗೆ ಅವಕಾಶ ಸಿಗುತ್ತಿರಲಿಲ್ಲ. ಆದ್ದರಿಂದ ಈಗ ಆ ರೀತಿಯಲ್ಲಿ ನಡೆಯಬಾರದು ಎಂದು ಮೆರಿಟ್ ಆಧಾರದಲ್ಲಿ ಅರ್ಹತೆ ಇದ್ದವರಿಗೆ ಅವಕಾಶ ನೀಡಲಾಗಿದೆ. ತಾವೂ ಸಹ ಕೈ, ಬಾಯಿ ಶುದ್ಧವಾಗಿಟ್ಟುಕೊಂಡು ಕೆಲಸ ನಿರ್ವಹಿಸಿ, ಅಂಗನವಾಡಿಗೆ ಬರುವ ಮಕ್ಕಳು ಬಡವರು, ಅವರನ್ನು ತಮ್ಮ ಮಕ್ಕಳಂತೆ ಪೋಷಣೆ ಮಾಡಲು ಸಲಹೆ ನೀಡಿದರು.

ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಮಾದರಿಯಾಗಿಸಿಕೊಂಡು ಈಗಾಗಲೇ ಸರ್ಕಾರಿ ಜಮೀನುಗಳಿಗೆ ದಾಖಲೆಗಳನ್ನು ಮಾಡಿಕೊಡುವ ಕೆಲಸವನ್ನು ಹಿಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷ ನಿರ್ವಹಿಸಿದ್ದಾರೆ. ಅದರಂತೆ ಕೋಲಾರ ತಾಲೂಕಿನ ೩೧೦ ಅಂಗನವಾಡಿ ಕೇಂದ್ರಗಳಿಗೆ ದಾಖಲೆಗಳನ್ನು ನೀಡಲಾಗಿದೆ, ನಗರದಲ್ಲಿ ೬ ಅಂಗನವಾಡಿ ಕೇಂದ್ರಗಳಿಗೆ ನಿವೇಶನ, ೧೦ ಹೊಸ ಕಟ್ಟಡಗಳಿಗೆ ಜಾಗ ಮಂಜೂರು ಮಾಡಲಾಗಿದೆ. ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸಲು ಅಧಿಕಾರಿಗಳಿದ್ದು ಅವರ ಸಲಹೆ- ಸೂಚನೆಗಳನ್ನು ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿ ಎಂದರು.

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬರುವವರು ಬಡವರು, ನಿಮ್ಮ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ಕಳುಹಿಸಿಕೊಟ್ಟಿರುತ್ತಾರೆ. ಆ ನಂಬಿಕೆ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ನಂತರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಕೊಟ್ಟಿದ್ದಾರೆ. ಈಗಾಗಲೇ ಕೋಲಾರ ಜಿಲ್ಲೆಗೆ ಗ್ಯಾರಂಟಿ ಯೋಜನೆಯ ಮೂಲಕ ೮೩೦ ಕೋಟಿ ರು. ಹಣ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ೫೮ ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ನಿಗದಿ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ತಾಪಂ ಇಒ ಮಂಜುನಾಥ್, ಸಿಡಿಪಿಒ ವಿನೋದ್, ಅಧಿಕಾರಿಗಳಾದ ವಂಶಿಕೃಷ್ಣ, ವಿಶ್ವನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ